ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮೀಸಲಾತಿ ರಕ್ಷಣಾ ಒಕ್ಕೂಟ ಒಪ್ಪಿಗೆ

ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮೀಸಲಾತಿ ರಕ್ಷಣಾ ಒಕ್ಕೂಟ ಒಪ್ಪಿಗೆ
ಬೆಂಗಳೂರು, ಮಾ.9-ಮಾದಿಗ ಅಭಿವೃದ್ಧಿ ನಿಗಮ ಸ್ಥಾಪಿಸುವ ರಾಜ್ಯಸರ್ಕಾರದ ನಿರ್ಧಾರವನ್ನು ಮೀಸಲಾತಿ ರಕ್ಷಣಾ ಒಕ್ಕೂಟ ಸ್ವಾಗತಿಸಿದೆ.
ಹಿರಿಯ ವಕೀಲರು, ಒಕ್ಕೂಟದ ಮುಖಂಡರಾದ ಶಂಕರಪ್ಪ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್ಥಿಕ ಮತ್ತು ಸಾಮಾಜಿಕವಾಗಿ ಮಾದಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ನಿಗಮ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ.
ನ್ಯಾ. ಸದಾಶಿವ ಸಮಿತಿ ರಚನೆಯೇ ಸಂವಿಧಾನ ನಡವಳಿಕೆಗೆ ವಿರುದ್ಧ ಮತ್ತು ಕಣ್ಣೊರೆಸುವ ತಂತ್ರವಾಗಿದ್ದರಿಂದ ಹಿಂದುಳಿದಿದ್ದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕುತ್ತಿರಲಿಲ್ಲ. ಅಲ್ಲದೇ ಪರಿಶಿಷ್ಟರ ನಡುವೆ ದಾಯಾದಿ ಕಲಹ ತಂದಿಡುವ ಹುನ್ನಾರ ಇದಾಗಿತ್ತು ಎಂದು ಅವರು ಹೇಳಿದ್ದಾರೆ.
ನ್ಯಾ. ಸದಾಶಿವ ಸಮಿತಿ ರಚನೆ ಹಾಗೂ ವರದಿಯು ಸಂವಿಧಾನ ಪರಿಚ್ಛೇಧ 341(2), ಹಾಗೂ 15 ಮತ್ತು 16ನೇ ನಿಯಗಳಿಗೆ ವಿರುದ್ಧವಾಗಿದೆ. ಒಳಮೀಸಲಾತಿ ನಿರ್ಧಾರ ಸಂಸತ್‍ಗೆ ಹೊರತುಪಡಿಸಿ ರಾಜ್ಯ ಸರ್ಕಾರ ಇಲ್ಲವೇ ಯಾವುದೇ ಸಮಿತಿಗೆ ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂಧ್ರ ಸರ್ಕಾರ ಮತ್ತು ಇವಿ ಚಿನ್ನಪ್ಪ ಪ್ರಕರಣ:2005, ಸುಪ್ರೀಂ-162, ಮಹರಾಷ್ಟ್ರ ಸರ್ಕಾರ ಮತ್ತು ಮಿಲಿಂದ್ ಪ್ರಕರಣ-2000, ಸುಪ್ರೀಂ429, ಸೂರತ್ ವಲ್ಹಾದ್ ಕೆಎಂಜಿ ಪರಿಷದ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ: ಸುಪ್ರೀಂ ಎಐಆರ್-2007 ಇವುಗಳಿಗೆ ಸಂಬಂಧಿತ ಆದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮತ್ತು ಬೇರ್ಪಡೆ ಕುರಿತು ಸ್ಪಷ್ಟ ಆದೇಶ ನೀಡಿದೆ.
ಇದೇ ವಿಷಯವಾಗಿ ಟ್ವೀಟ್ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಗಮನಸೆಳೆದು ಸಂವಿಧಾನ ಬಾಹಿರ ಮತ್ತು ಕಾನೂನು ವಿರುದ್ಧವಾದ ನಡವಳಿಕೆಯಿಂದ ಅನ್ಯಾಯ ಆಗಲಿದೆಯೇ ಹೊರತು ನ್ಯಾಯ ದೊರಕುವುದಿಲ್ಲ. ಹೀಗಾಗಿ ಮಾದಿಗ ಸಮುದಾಯದ ಅಭಿವೃದ್ದಿಗೆ ನಿಗಮ ರಚಿಸುವಂತೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ದಾಯಾದಿ ಕಲಹಕ್ಕೆ ಅಂತ್ಯ ಹಾಡಿದೆ ಎಂದು ಹೇಳಿದ್ದಾರೆ.
ನ್ಯಾ. ಸದಾಶಿವ ವರದಿ ಜಾರಿಗೊಳಿಸಿದಲ್ಲಿ 2ಎ, 2ಬಿ ಮತ್ತು 3ಎ ವರ್ಗಗಳು ಮೀಸಲಾತಿ ಕೇಳಲು ಅವಕಾಶಗಳಿದ್ದವು. ಇದರಿಂದ ಜಾತಿ-ಜಾತಿಗಳ ನಡುವೆ ದಾಯಾದಿ ಕಲಹಕ್ಕೆ ಕಾರಣವಾಗುತ್ತಿತ್ತು. ಮಾದಿಗ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಮುದಾಯದ ಅಭಿವೃದ್ದಿಗೆ ನ್ಯಾಯ ಕಲ್ಪಿಸಿಕೊಡುವಂತೆ ಶಂಕರಪ್ಪ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ