ಹಾಲಿ ಧ್ವಜವೇ ನಾಡಧ್ವಜವಾಗಿ ಮುಂದುವರಿಯಲಿ: ವಾಟಾಳ್ ನಾಗರಾಜ್ ಒತ್ತಾಯ
ಬೆಂಗಳೂರು, ಮಾ.9- ಕಳೆದ 50 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ಅವರ ಭಾವನೆಗಳ ಬೆಳಕಾಗಿದ್ದ ಹಾಲಿ ಧ್ವಜವೇ ನಾಡಧ್ವಜವಾಗಿ ಮುಂದುವರಿಯಲಿ. ಹೊಸ ಮಾದರಿಯ ನಾಡಧ್ವಜವನ್ನು ನಾವು ಒಪ್ಪುವುದಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಹೊಸ ನಾಡಧ್ವಜ ರೂಪಿಸಿ ಅನಾವರಣಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು, ನಮಗೆ ಸರ್ಕಾರಿ ಧ್ವಜ ಅಗತ್ಯವಿಲ್ಲ. ಕಳೆದ 50 ವರ್ಷಗಳಿಂದಲೂ ಕನ್ನಡಿಗರು ಬಳಸುತ್ತ ಬಂದ, ಎತ್ತಿ ಹಿಡಿದ ಹಳದಿ-ಕೆಂಪು ಬಣ್ಣದ ಧ್ವಜವೇ ನಮ್ಮ ನಾಡಧ್ವಜ ಎಂದು ಹೇಳಿದರು.
ಸಾಹಿತಿಗಳು, ಬರಹಗಾರರು, ಬುದ್ಧಿಜೀವಿಗಳು, ಅಧಿಕಾರಿಗಳು ಸೇರಿ ಹೊಸ ನಾಡಧ್ವಜ ರೂಪಿಸಿದ್ದಾರೆ. ಆದರೆ, ಇದೇ ಸಾಹಿತಿಗಳು ಹಳದಿ, ಕೆಂಪು ಬಣ್ಣದ ಧ್ವಜವನ್ನೇ ಕಳೆದ ಐದು ದಶಕಗಳಿಂದಲೂ ನಾಡಧ್ವಜವೆಂದು ಹಾರಿಸುತ್ತ ಬಂದಿದ್ದರು. ಪ್ರತೀ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ನಾಡಧ್ವಜಾರೋಹಣ ನಡೆಯುತ್ತಿತ್ತು.
ನವೆಂಬರ್ 1ರಂದು ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸರ್ಕಾರವೇ ಹಳದಿ-ಕೆಂಪು ಬಣ್ಣದ ಧ್ವಜವನ್ನು ಹಾರಿಸುತ್ತಿತ್ತು. ಆಗ ಇದು ಸರ್ಕಾರಿ ಧ್ವಜವಾಗಿರಲಿಲ್ಲವೆ? ಇದೇ ಧ್ವಜದ ಸಿಂಧುತ್ವಕ್ಕೆ ಸರ್ಕಾರ ಮಾನ್ಯತೆ ನೀಡುವುದನ್ನು ಬಿಟ್ಟು ಹಳದಿ-ಕೆಂಪು-ಬಿಳಿ ಮೂರು ಬಣ್ಣ ಹಾಗೂ ಗಂಡುಬೇರುಂಡದ ಚಿಹ್ನೆಯುಳ್ಳ ಧ್ವಜ ರೂಪಿಸಿರುವ ಕ್ರಮ ಸರಿಯಲ್ಲ.
ನಿನ್ನೆ ಈ ಧ್ವಜವನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ನಾನು ಹಾಜರಿದ್ದಿದ್ದರೆ ಅಲ್ಲೇ ಇದನ್ನು ವಿರೋಧಿಸುತ್ತಿದ್ದೆ. ಡಬ್ಬಿಂಗ್ ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣ ಅಲ್ಲಿಗೆ ತೆರಳಬೇಕಾಗಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಇದನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ರೂಪಿಸಿರುವ ಧ್ವಜವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.
ಕಳೆದ ಐದು ದಶಕಗಳ ಹಿಂದೆ ಮ.ರಾಮಮೂರ್ತಿ ಹಾಗೂ ನಾವು ಕೆಂಪು-ಹಳದಿ ಕರ್ನಾಟಕದ ಭೂಪಟ ಹಾಗೂ ಏಳು ತೆನೆಗಳುಳ್ಳ ಧ್ವಜವನ್ನು ರೂಪಿಸಿದ್ದೆವು. ನಂತರ ರಾಮಮೂರ್ತಿ ಅವರು ಹಳದಿ-ಕೆಂಪು ಬಾವುಟವನ್ನು ರೂಪಿಸಿದ್ದಾಗ ಅದು ನಮ್ಮ ನಾಡಿನ ಬಾವುಟವೆಂದು ಅಂದೇ ಒಪ್ಪಿಕೊಂಡಿದ್ದೆವು. 50 ವರ್ಷಗಳಿಂದ ಅದನ್ನೇ ಹಾರಿಸುತ್ತ ಬಂದಿದ್ದೇವೆ. ಈಗ ಏಕಾಏಕಿ ಬದಲಾವಣೆ ಮಾಡುವ ಅಗತ್ಯತೆ, ಅನಿವಾರ್ಯತೆ ಏನಿತ್ತು. ನಾಡಿನ ಧ್ವಜದ ಮಹತ್ವ ಅರಿಯದ ಕೆಲವು ಸಾಹಿತಿಗಳು, ಬುದ್ಧಿ ಜೀವಿಗಳು ಇದಕ್ಕೆ ಬೆಂಬಲ ನೀಡಿದ್ದಾರೆ.
ಕೆಂಪು-ಹಳದಿ ಧ್ವಜವನ್ನೇ ಹಿಡಿದು ಸಾಕಷ್ಟು ಹೋರಾಟ ಮಾಡಿದ್ದೇವೆ. ನಾಡು ಕಟ್ಟುವಲ್ಲಿ ಶ್ರಮಿಸಿದ್ದೇವೆ. ಅದನ್ನೇ ನಾವು ಮುಂದುವರಿಸುತ್ತೇವೆ ಎಂದು ವಾಟಾಳ್ ಹೇಳಿದರು.