
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ಶೆಟ್ಟಿ ಮೇಲೆ ಹಲ್ಲೆ ಖಂಡಿಸಿ ಜೆಡಿಎಸ್ ಪ್ರತಿಭಥನೆ
ಬೆಂಗಳೂರು, ಮಾ.9- ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು.
ಈ ವೇಳೆ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸುವ ಕೆಲಸ ಮಾಡಿತ್ತು. ಈಗ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದಿದೆ. ನ್ಯಾಯಮೂರ್ತಿಗಳಿಗೂ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಗರ ಸೇರಿದಂತೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಮ್ಮನ್ನು ಅಧಿಕಾರಕ್ಕೆ ತನ್ನಿ, ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬುತ್ತೇವೆ, ಭ್ರಷ್ಟಾಚಾರ ವಿರುದ್ಧ ಸಮರ ಸಾರುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯ ಶಕ್ತಿ ಕುಗ್ಗಿಸಿದರು. ಎಸಿಬಿ ರಚನೆ ಮಾಡಿದರು. ಆದರೆ, ಭ್ರಷ್ಟಾಚಾರ ನಿಗ್ರಹ ಸಾಧ್ಯವಾಗಿಲ್ಲ. ರಕ್ಷಣೆ ಇಲ್ಲದ ಪರಿಸ್ಥಿತಿ ಮುಂದುವರೆದಿದೆ ಎಂದು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ತೀವ್ರವಾಗಿ ಕುಸಿದಿದೆ. ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದಿರುವುದೇ ಇದಕ್ಕೆ ಸಾಕ್ಷಿ. ಇಂತಹ ಭ್ರಷ್ಟ ಆಡಳಿತವನ್ನು ಖಂಡಿಸಿ ನಾಳೆಯಿಂದ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.