ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವದ ಯೋಜನೆಗೆ ವಿರೋಧ

ನವದೆಹಲಿ, ಮಾ.8- ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ನಲ್ಲಿ ಆಂತರಿಕ ಬದಲಾವಣೆಗಳನ್ನು ಮಾಡಬೇಕೆಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವದ ಯೋಜನೆಗೆ ಆರಂಭದಲ್ಲಿ ವಿಘ್ನಗಳು ಎದುರಾಗಿವೆ. ಈ ಉಪಕ್ರಮಕ್ಕೆ ಪಕ್ಷದ ಹಿರಿಯ ಮುಖಂಡರು ಅಪಸ್ವರ ಎತ್ತಿದ್ದು, ಇದರಿಂದಾಗಿ ರಾಹುಲ್ ಒಂದು ಬಣದಿಂದ ತೀವ್ರ ವಿರೋಧ ಎದುರಿಸುವಂತಾಗಿದೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಅಧ್ಯಕ್ಷರಾಗಿ ರಾಹುಲ್ ಅಧಿಕಾರ ಸ್ವೀಕರಿಸಿದ ನಂತರ, ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಅಂಗಸಂಸ್ಥೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ 12 ಸ್ಥಾನಗಳಿಗೆ ಚುನಾವಣೆ ನಡೆಸುವ ಇಚ್ಚೆ ವ್ಯಕ್ತಪಡಿಸಿದ್ದರು. ಆದರೆ ಈ ಹೊಸ ಆಲೋಚನೆಗೆ ಧುರೀಣರು ವಿರೋಧ ವ್ಯಕ್ತಪಡಿಸಿದ್ದಾರೆ. ಹುದ್ದೆಗಳ ಆಯ್ಕೆಗಾಗಿ ಚುನಾವಣೆ ನಡೆಸುವುದು ಬೇಡ. ನೇಮಕ ಮಾಡುವ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿಂದೆ 19 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದ ಸೋನಿಯಾ ಗಾಂಧಿ ಅವರು, ಚುನಾವಣೆ ನಡೆಸಬೇಕೆಂದು ಪಕ್ಷದ ನಿಯಮಾವಳಿಗಳಲ್ಲಿ ತಿಳಿಸಿದ್ದರೂ, ಸಿಡಬ್ಲ್ಯುಸಿ ಎಲ್ಲ ಪದಾಧಿಕಾರಿ ಹುದ್ದೆಗಳನ್ನು ಒಮ್ಮತದಿಂದ ಆಯ್ಕೆ ಮಾಡುತ್ತಿದ್ದರು. ಹೀಗಾಗಿ ಚುನಾವಣೆಯ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಸೋನಿಯಾ ಅವರ ಈ ಕ್ರಮವನ್ನು ಹಿರಿಯ ಧುರೀಣರು ಮೆಚ್ಚಿಕೊಂಡಿದ್ದರು.
ಆದರೆ, ಹಳೆ ಸಾಂಪ್ರದಾಯವನ್ನು ಬದಲಿಸಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಗೆ ಚುನಾವಣೆ ನಡೆಸಬೇಕೆಂಬುದು ರಾಹುಲ್ ಅವರ ಇರಾದೆಯಾಗಿದೆ. ಆದರೆ ಈ ಹೊಸ ಆಲೋಚನೆಗೆ ವಿರೋಧ ವ್ಯಕ್ತಪಡಿಸಿರುವ ಹಳಬರು, ಚುನಾವಣೆ ಬೇಡವೇ ಬೇಡ. ಹಳೆಯ ಪದ್ದತಿಯನ್ನೇ ಮುಂದುವರಿಸಬೇಕು. ಸಿಡಬ್ಲ್ಯುಸಿಗೆ ನೇಮಕ ಮಾಡಲು ರಾಹುಲ್‍ಗೆ ನಾವು ಮುಕ್ತ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಪ್ರತಿನಿಧಿಗಳಿಂದ ಸಿಡಬ್ಲ್ಯುಸಿಗೆ 10 ಸದಸ್ಯರನ್ನು ಚುನಾಯಿಸಬಹುದು ಹಾಗೂ ಪಕ್ಷದ ಅಧ್ಯಕ್ಷರು ಇತರ 10 ಮಂದಿಯನ್ನು ನೇಮಕ ಮಾಡಬಹುದು ಎಂದು ಕಾಂಗ್ರೆಸ್ ಪಕ್ಷದ ಸಂವಿಧಾನ ಹೇಳುತ್ತದೆ. ಸಮಿತಿಯು ಕನಿಷ್ಠ 20 ಸದಸ್ಯರನ್ನು ಹೊಂದಿರುಬೇಕು. ಕೆಲವೊಮ್ಮೆ ಇದರಲ್ಲಿ ಶಾಶ್ವತ ಆಹ್ವಾನಿತರಾಗಿ ಹೆಚ್ಚು ಜನರು ಇರುತ್ತಾರೆ.
1992 ಮತ್ತು 1997ರಲ್ಲಿ ಸಿಡಬ್ಲ್ಯುಸಿ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆಗಳು ನಡೆದಿತ್ತು. ಪಿ.ವಿ.ನರಸಿಂಹ ರಾವ್ ಮತ್ತು ಸೀತಾರಾಂ ಕೇಸರಿ ಅವರಂಥ ಹಿರಿಯ ಧುರೀಣರ ನಾಯಕತ್ವವನ್ನು ಪಕ್ಷದ ಇತರ ಮುಖಂಡರು ಒಪ್ಪಲು ಸಿದ್ದರಿಲ್ಲದಿದ್ದ ಸನ್ನಿವೇಶದಲ್ಲಿ ಬಲ ಪ್ರದರ್ಶನಕ್ಕಾಗಿ ಚುನಾವಣೆ ನಡೆಸಬೇಕಾಯಿತು. ಆದರೆ ಅಂಥ ಪರಿಸ್ಥಿತಿ ಇಲ್ಲ. ಎಲ್ಲರೂ ರಾಹುಲ್ ಅವರನ್ನು ಪಕ್ಷದ ಸಮರ್ಥ ನಾಯಕ ಎಂಬುದನ್ನು ಒಪ್ಪಿಕೊಂಡಿದ್ದಾರೆ ಹಾಗೂ ಅವರ ನಾಯಕತ್ವದಲ್ಲಿ ಬಲವಾದ ನಂಬಿಕೆ ಹೊಂದಿದ್ದಾರೆ. ಹೀಗಿರುವ ಚುನಾವಣೆ ನಡೆಸುವ ಅಗತ್ಯವಿಲ್ಲ. ಮೇಲಾಗಿ ಅವರು ಸಿಡಬ್ಲ್ಯುಸಿಗೆ ನೇಮಕ ಮಾಡಲು ಮುಕ್ತ ಅವಕಾಶ ಇದೆ ಎಂಬುದು ಹಿರಿಯರ ವಾದವಾಗಿದೆ.
ಮುಂದಿನ ವಾರ ನಡೆಯುವ ಕಾಂಗ್ರೆಸ್ ಅಧಿವೇಶನದಲ್ಲಿ ಸಿಡಬ್ಲ್ಯುಸಿಗೆ ಚುನಾವಣೆ ನಡೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ