ಕಿತ್ತೂರು ರಾಣಿ ಚನ್ಮಮ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾ.8- ಮಹಿಳೆಯರು ಸ್ವಾತಂತ್ರ್ಯ ಪಡೆಯಬೇಕಾದರೆ ಅದರ ಹಿಂದೆ ಹೋರಾಟ ಇದ್ದೇ ಇರುತ್ತದೆ. ಹೋರಾಟ ಇಲ್ಲದೆ ಮಹಿಳೆಯರಿಗೆ ಸುಲಭವಾಗಿ ಯಾವುದರಲ್ಲೂ ಜಯ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಿತ್ತೂರು ರಾಣಿ ಚನ್ಮಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕರ್ಮಿಣಿಸೌಧ ಶಿಲಾನ್ಯಾಸವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗುತ್ತಿರುವುದು ಹೆಮ್ಮೆಯ ವಿಷಯ ಎಂದರು.

1975ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಘೋಷಣೆಯಾಗಿದ್ದು ಇದರ ಹಿಂದೆ ಹೋರಾಟದ ಇತಿಹಾಸವಿದೆ. ಇಂದು ಮಾತ್ರ ಮಹಿಳಾ ದಿನಾಚರಣೆಯಾಗಬಾರದು. ಸುಖಸಮೃದ್ಧಿ ಸಿಕ್ಕಾಗ ಪ್ರತಿದಿನವು ಮಹಿಳಾ ದಿನಾಚರಣೆಯಾಗಿ ಆಚರಿಸಬೇಕು. ನಮ್ಮ ಸ್ವಾತಂತ್ರ್ಯದ ಹಕ್ಕುಗಳನ್ನು ಹತ್ತಿಕ್ಕುವುದು ಅನಾದಿಕಾಲದಿಂದಲೂ ಬಂದಿದೆ. ಆದ್ದರಿಂದ ಜಾಗೃತವಾಗಿ ಎಲ್ಲ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸ್ವಂತ ಬುದ್ದಿಶಕ್ತಿಯಿಂದ ಮುಂದುವರೆಯಬೇಕು. ಹಿರಿಯರು, ಪೂರ್ವಜರು ನಮ್ಮ ತಾಯಿ ಅನುಭವಿಸಿದ ನೋವುಗಳನ್ನು ನಾವು ಅನುಭವಿಸಬಾರದು ಎಂದರೆ ನಾವು ಶಿಕ್ಷಣದತ್ತ ಮುಖ ಮಾಡಬೇಕು. ಶಿಕ್ಷಣದಿಂದ ಏನಾದರೂ ಸಾಧಿಸಬಹುದು ಎಂದು ತಿಳಿಸಿದರು.

ಕರ್ಮಿಣಿ ಸೌಧದ ನಿರ್ಮಾಣವನ್ನು 9 ಕೋಟಿ ವೆಚ್ಚದಲ್ಲಿ ನಾಗರಬಾವಿಯ 2ನೇ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮಹಿಳೆಯರಿಗೆ ವಿವಿಧ ರೀತಿಯ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ 2017-18ನೇ ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಆರು ಮಹಿಳಾ ಸಂಘಸಂಸ್ಥೆಗಳ ಎಂಟು ಮಹಿಳೆಯರಿಗೆ, ಕಲೆ ಕ್ಷೇತ್ರದಿಂದ ಐವರಿಗೆ, ಕ್ರೀಡೆಯಿಂದ ಇಬ್ಬರು, ಶಿಕ್ಷಣ ಕ್ಷೇತ್ರದ ಒಬ್ಬರಿಗೆ , ಸಾಹಿತ್ಯದಲ್ಲಿ ಮೂವರು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನ ದೇವದಾಸಿಯರ ನಿರ್ಮೂಲನೆಗಾಗಿ ಹೋರಾಟ ಮಾಡಿದ ಸೀತಮ್ಮ ಗುಂಡಪ್ಪ ಜೋಡತ್ತಿ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಅಂತರಾಳ ಎಂಬ ಕಿತ್ತುಹೊತ್ತಿಗೆಯ 13ನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ