ವಿಜಯಪುರ,ಮಾ.8-ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಚಾಕು ಇರಿತ ಆಗಿರುವುದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಹಲ್ಲೆ ನಡೆಯಬಹುದು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಬಲೇಶ್ವರ ಮತಕ್ಷೇತ್ರದ ಪಾಂಚಜನ್ಯ ಕಚೇರಿ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕೇಂದ್ರ ಗೃಹ ಸಚಿವಾಲಯದಿಂದ ಭದ್ರತೆ ಪಡೆಯಬೇಕೆಂದು ಸಲಹೆ ನೀಡಿದರು.
ಕೇವಲ ಮುಖ್ಯಮಂತ್ರಿಗಳಿಗಷ್ಟೇ ಅಲ್ಲ. ಗೃಹ ಸಚಿವರಿಗೂ ರಕ್ಷಣೆ ಅಗತ್ಯವಿದೆ. ರಾಜ್ಯದಲ್ಲಿ ಸಾಲು ಸಾಲು ಕೊಲೆ, ಹಲ್ಲೆ ಪ್ರಕರಣಗಳು ನಡೆಯುತ್ತಿದ್ದರೂ ಸಿದ್ದರಾಮಯ್ಯನವರು ಮಾತ್ರ ಏನೂ ಆಗಿಲ್ಲವೆಂಬಂತೆ ಸುಮ್ಮನಿರುತ್ತಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಕಾಂಗ್ರೆಸ್ ಶಾಸಕ ಹ್ಯಾರೀಸ್ ಅವರ ಮಗ ಮೊಹಮ್ಮದ್ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ನಿರ್ಲಕ್ಷ್ಯದಿಂದಿದ್ದಾರೆ ಎಂದು ದೂರಿದರು. ಕೊಲೆಗಡುಕರ ಬಗ್ಗೆ ಸಿದ್ದರಾಮಯ್ಯ ಮೃದುಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಲುವ ಭೀತಿ: ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಸೋಲುವ ಭೀತಿ ಇದೆ. ಹಾಗಾಗಿ ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ ಎಂದು ಗುಡುಗಿದ ಈಶ್ವರಪ್ಪ , ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಈ ರೀತಿ ರಾಜಕೀಯ ವ್ಯಭಿಚಾರ ಮಾಡುವುದು ಸರಿಯಲ್ಲ. ಅಶೋಕ್ ಖೇಣಿ, ಆನಂದ್ ಸಿಂಗ್ ಅವರಂತಹ ಹಣ ಇರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಾತೆತ್ತಿದರೆ ಸಿದ್ದರಾಮಯ್ಯ ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಎಂದು ಹೇಳುತ್ತಾರೆ. ಅಂಥವರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
ರಾಯಣ್ಣ ಬ್ರಿಗೇಡ್ ಮುಖಂಡರು ಕಾಂಗ್ರೆಸ್ಗೆ ಸೇರುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಇದು ಚುನಾವಣಾ ಸಮಯ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು ಎಂದರು.
ತ್ರಿಪುರದಲ್ಲಿ ಲೆನಿನ್ ಮೂರ್ತಿ ಭಗ್ನ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಲೆನಿನ್ ಮೂರ್ತಿ ಒಡೆದಿರುವುದು ನಿಜ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.