ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ನವದೆಹಲಿ/ಮುಂಬೈ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವಿ ಮತ್ತು ಬಹು ಮೆಚ್ಚಿನ ಖ್ಯಾತನಾಮ ಮಹಿಳಾಮಣಿಗಳನ್ನು ಸಮೀಕ್ಷೆಯೊಂದು ಗುರುತಿಸಿದೆ. ಅದರ ಪ್ರಕಾರ ಸಿನಿಮಾ ಕ್ಷೇತ್ರದಲ್ಲಿ ಮೋಹಕ ತಾರೆ ಶ್ರೀದೇವಿ ಜಾದೂ ಮಾಡಿದ್ದರೆ, ರಾಜಕೀಯ ರಂಗದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅತ್ಯಂತ ಜನಪ್ರಿಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೇಶದ ಪ್ರಮುಖ ಅನ್ವೇಷಣೆ ಮತ್ತು ವಾಣಿಜ್ಯ ವೇದಿಕೆಯಾದ ಮ್ಯಾಜಿಕ್‍ಪಿನ್ ಸಿನಿಮಾ, ಕ್ರೀಡೆ, ರಾಜಕೀಯ, ಸಾಹಿತ್ಯ ಹಾಗೂ ಕಲೆ, ವಿಜ್ಞಾನ ಮತ್ತು ಸಂಸ್ಕøತಿ-ಈ ಐದು ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದ ಖ್ಯಾತ ವನಿತೆಯರ ಸರ್ವೆ ಮಾಡಿದ್ದು. ಅದರ ಫಲಿತಾಂಶ ಹೊರಬಿದ್ದಿದೆ.
ಬಾಲಿವುಡ್‍ನಲ್ಲಿ ಅತಿ ಹೆಚ್ಚು ಮಂದಿ ಬಹುಭಾಷಾ ತಾರೆ ಶ್ರೀದೇವಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರೆ, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾ ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ಕ್ಷೇತ್ರದಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ.
ಬಾಲಿವುಡ್: ಇತ್ತೀಚೆಗಷ್ಟೇ ದುಬೈನ ಹೋಟೆಲ್‍ನಲ್ಲಿ ದುರಂತ ಸಾವಿಗೀಡಾದ ಭಾರತದ ಪ್ರಥಮ ಮಹಿಳಾ ಸೂಪರ್‍ಸ್ಟಾರ್ ಶ್ರೀದೇವಿ ಪರ ಶೇ.53 ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 18 ರಿಂದ 25 ವಯೋಮಾನದವರಲ್ಲಿ ಶೇ.63ರಷ್ಟು ಮಹಿಳೆಯರ ಮತ್ತು ಶೇ.37ರಷ್ಟು ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಉಳಿದಂತೆ ಹಿರಿಯ ಅಭಿನೇತ್ರಿ ರೇಖಾ ಪರ ಶೇ.22 ಹಾಗೂ ಡ್ರೀಮ್‍ಗರ್ಲ್ ಹೇಮಾಮಾಲಿನಿ ಪರ ಶೇ.20ರಷ್ಟು ಮತಗಳು ಸಂದಾಯವಾಗಿವೆ. ಹಿರಿಯ ನಟಿ ಶರ್ಮಿಳಾ ಠಾಗೋರ್ ಪರ ಕೇವಲ ಶೇ.4ರಷ್ಟು ಮತಗಳು ಚಲಾವಣೆಯಾಗಿವೆ.
ರಾಜಕೀಯ: ರಾಜಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ನಾಯಕಿ ಎಂಬ ಹೆಗ್ಗಳಿಕೆಗೆ ಕೇಂದ್ರ ಸಚಿವ ಸುಷ್ಮಾ ಸ್ವರಾಜ್ ಪಾತ್ರರಾಗಿದ್ದಾರೆ. ಅವರ ಪರವಾಗಿ ಶೇ.37 ಮಂದಿ ಮತ ಚಲಾಯಿಸಿದ್ದಾರೆ. ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಶೇ.33ರಷ್ಟು ಮತಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಯುಪಿಎ ನಾಯಕಿ ಸೋನಿಯಾ ಗಾಂಧಿ ಶೇ.19 ಮತಗಳೊಂದಿಗೆ ಮೂರನೇ ಕ್ರಮಾಂಕದಲ್ಲಿದ್ದಾರೆ. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್‍ಪಿ ನಾಯಕಿ ಮಯಾವತಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕ್ರೀಡೆ: ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಶೇ.33ರಷ್ಟು ಮತಗಳೊಂದಿಗೆ ಜನಪ್ರಿಯ ತಾರೆ ಎನಿಸಿದ್ದಾರೆ. ಇವರ ಪರ ಶೇ.63ರಷ್ಟು ಪುರುಷರು ಮತ ಹಾಕಿದ್ದಾರೆ. ಕುಸ್ತಿ ಪಟು ಗೀತಾ ಫೆÇೀಗಟ್ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾಗೂ ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ನಂತರದ ಸ್ಥಾನಗಳಲ್ಲಿದ್ದಾರೆ.
ಸಾಹಿತ್ಯ: ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಶೇ.55ರಷ್ಟು ಮತಗಳನ್ನು ಗಳಿಸಿ ಅಚ್ಚುಮೆಚ್ಚಿನ ಲೇಖಕಿಯಾಗಿದ್ದಾರೆ. ನಟಿ, ನಿರ್ಮಾಪಕಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ, ವಿವಾದಾತ್ಮಕ ಲೇಖಕಿ ಶೋಭಾ ಡೇ ಮತ್ತು ಪ್ರಸಿದ್ಧ ಕಾದಂಬರಿಗಾರ್ತಿ ಅರುಂಧತಿ ರಾಯ್ ಸಹ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಲೆ, ವಿಜ್ಞಾನ ಮತ್ತು ಸಂಸ್ಕøತಿ
ಈ ವಿಭಾಗದಲ್ಲಿ ಗಗನಯಾತ್ರಿ ಕಲ್ಪನಾ ಚಾವ್ಲಾ ಬಹು ಮೆಚ್ಚಿನ ಮತ್ತು ಗೌರವಾನ್ವಿತ ಮಹಿಳೆಯಾಗಿದ್ದಾರೆ. ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ನಂತರದ ಜನಪ್ರಿಯ ತಾರೆ ಎನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ