ಹಾಸನ, ಮಾ.8- ಬಿಜೆಪಿಯವರು ಕರ್ನಾಟಕದಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್ನಲ್ಲಿ, ಕರ್ನಾಟಕದಲ್ಲಲ್ಲ. ಅವರ ಆಟ ಇಲ್ಲಿ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗುಡುಗಿದ್ದಾರೆ.
ಹಾಸನದಲ್ಲಿಂದು ಹಮ್ಮಿಕೊಂಡಿದ್ದ ವಿಕಾಸಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಮಲ ನಾಯಕರ ಯಾತ್ರೆಯಿಂದ ಜನರು ಮರುಳಾಗುವುದಿಲ್ಲ. ಬುದ್ಧಿವಂತರಿದ್ದಾರೆ. ಉತ್ತಮರನ್ನು ಆರಿಸುತ್ತಾರೆ. ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್ನಲ್ಲಿ, ಕರ್ನಾಟಕದಲ್ಲಲ್ಲ ಎಂದರು.
ರಾಜ್ಯ ಸರ್ಕಾರ ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ವಿಫಲವಾಗಿದೆ. ಲೋಕಾಯುಕ್ತರಿಗೆ ರಕ್ಷಣೆ ಕೊಡಲಾಗದವರು ನಾಡಿನ ಜನರಿಗೆ ಹೇಗೆ ರಕ್ಷಣೆ ಕೊಡುತ್ತೀರಿ ಎಂದು ಪ್ರಶ್ನಿಸಿದ ಅವರು, ಭದ್ರತಾ ವ್ಯವಸ್ಥೆ ಬಗ್ಗೆ ಸಿಎಂ ಅವರೇ ಸ್ಪಷ್ಟನೆ ನೀಡಲಿ. ನಿನ್ನೆಯ ಘಟನೆಗೆ ಯಾರು ಹೊಣೆ, ಯಾರ ತಲೆದಂಡ ಆಗಬೇಕು ಎಂದು ಮುಖ್ಯಮಂತ್ರಿಗಳೇ ಹೇಳಲಿ ಎಂದು ತಿಳಿಸಿದರು.
ಲೋಕಾಯುಕ್ತ ಕಚೇರಿಯಲ್ಲಿ ಮೆಟಲ್ ಡಿಟೆಕ್ಟಿವ್ ರಿಪೇರಿ ಮಾಡಿಸದಷ್ಟು ದರಿದ್ರ ಸರ್ಕಾರಕ್ಕೆ ಬಂದಿದೆಯಾ? ನೈತಿಕತೆ ಇದ್ದರೆ ಗೃಹ ಸಚಿವರು ರಾಜೀನಾಮೆ ನೀಡಲಿ. ಜೆಡಿಎಸ್ ಬಗ್ಗೆ ಮುಖ್ಯಮಂತ್ರಿಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಆರೂವರೆ ಕೋಟಿ ಜನ ಇವರ ಜೇಬಲ್ಲಿ ಇದ್ದಾರಾ? ಈಗ ಜೆಡಿಎಸ್ ಜತೆ ಬೆಂಬಲ ಬೇಡ ಅಂತೀರಿ? ನಂಜನಗೂಡು-ಗುಂಡ್ಲುಪೇಟೆ ಚುನಾವಣೆಯಲ್ಲಿ ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೆವಾ? ನಿಮ್ಮ ಅಹಂಕಾರಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.
ಎವ್ವೆರಿ ಹಾಲಿಡೆ ಈಸ್ ನಾಟ್ ಸಂಡೇ ಸಿದ್ದರಾಮಯ್ಯನವರೇ ಎಂದು ಕಿಡಿಕಾರಿದ ಅವರು, ದುರಹಂಕಾರದ ಮಾತು ನಿಲ್ಲಿಸಿ, ಸೋಲಾರ್ ಭಾರತ್ 8ನೆ ಅದ್ಭುತವೇನಲ್ಲ, ಅದು ಗಂಟಿನ ಅದ್ಭುತ. ಜಾಹೀರಾತು ಮೂಲಕ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಫಾರುಕ್ ಅವರೇ ಅಭ್ಯರ್ಥಿ. ಕಾಂಗ್ರೆಸ್ ಬೆಂಬಲ ಕೋರಿ ನಾನು ಅರ್ಜಿ ಹಿಡಿದು ಹೋಗಿಲ್ಲ. ನೈಸ್ ಅಕ್ರಮದ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ. ಕಾಂಗ್ರೆಸ್ನಿಂದ ಸಾಧ್ಯವಿಲ್ಲ ಎಂದರು.
ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ರದ್ದು ಮಾಡಿದ್ದೀರ. ಈಗ ಮತ್ತೆ ವರ್ಗಾವಣೆ ಮಾಡಿದ್ದೀರ. ಇದೇ ನಿಮ್ಮ ಕೆಲಸಾನಾ? ಏನು ನಿಮ್ಮ ಪಾಲಿಸಿ? ನಿಮ್ಮ ದಾರಿಗೆ ಬರಲಿಲ್ಲ ಎಂದು ವರ್ಗಾವಣೆ ಮಾಡಿದ್ದೀರಾ? ಲೋಕಾಯುಕ್ತ ಸಂಸ್ಥೆಯನ್ನು ಮೊದಲನೆ ಹಂತದಲ್ಲಿ ಸಾಯಿಸಿದ್ದೀರಿ… ಈಗ ಹೆಸರಿಗಷ್ಟೇ ಇಟ್ಟುಕೊಂಡಿದ್ದೀರಿ… ನಿನ್ನೆ ನಡೆದ ಘಟನೆಗೆ ನಿಮ್ಮ ಪ್ರೇರಣೆ ಇದೆಯೇ..? ಅದನ್ನಾದರೂ ಹೇಳಿ ಎಂದು ಪ್ರಶ್ನಿಸಿದರು.