
ಮಹಿಳೆಯರು ತಮ್ಮ ಬೆಳವಣಿಗೆಯೊಂದಿಗೆ ಸಮಾಜಮುಖಿಯಾದ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು: ಸಚಿವೆ ಉಮಾಶ್ರೀ ಕರೆ
ಬೆಂಗಳೂರು, ಮಾ.8- ಮಹಿಳೆಯರಿಗೆ ಸಮಾನ ಅವಕಾಶ, ಗೌರವ, ಶಕ್ತಿ ದೊರೆಯುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯ ಮಾಡುವಂತಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.
ಕರ್ನಾಟಕ ವಿಧಾನ ಪರಿಷತ್ ಸಚಿವಾಲಯ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಬೆಳವಣಿಗೆಯೊಂದಿಗೆ ಸಮಾಜಮುಖಿಯಾದ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಆರ್ಥಿಕ ಸ್ವಾವಲಂಬನೆ ಸಾಧಿಸಲು ಮಹಿಳೆಯರು ಮಹತ್ವದ ಹೆಜ್ಜೆ ಇಡಬೇಕು ಎಂದು ಹೇಳಿದರು.
ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಹೆಣ್ಣು ಭೋಗದ ವಸ್ತುವಲ್ಲ, ಬೊಂಬೆಯಲ್ಲ. ಅದನ್ನು ಅರ್ಥ ಮಾಡಿಕೊಂಡು ಗೌರವದಿಂದ ಕಾಣಬೇಕು. ಹೆಣ್ಣನ್ನು ಜೀವನದ ಭಾಗವೆಂದು ಪರಿಗಣಿಸಬೇಕು. ಅವರಿಗೆ ನೋವು ಕೊಡಬಾರದು ಎಂದರು.
ಮಹಿಳೆಯರಿಗೆ ಸಮಾನತೆ ನೀಡಬೇಕು. ಮಹಿಳೆಯರು ಕೂಡ ಹೊಸ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು ಎಂದ ಅವರು, ಮಹಿಳೆ ಅನುಭವಿಸುವ ನೋವು, ಸಂಕಟಗಳು ಪುರುಷರಿಗಿರುವುದಿಲ್ಲ. ಹಾಗಾಗಿ ಕಾಲ ಬದಲಾದಂತೆ ಪುರುಷರೂ ಬದಲಾಗಬೇಕಿದೆ ಎಂದು ಹೇಳಿದರು.
ಮಹಿಳೆಯರನ್ನು ಜಗಳಗಂಟಿ ಎಂಬ ಪದದಿಂದ ಕರೆಯುವುದು ನಿಲ್ಲಬೇಕು. ಮೊದಲಿನಿಂದ ಸರಿಯಾಗಿ ನಡೆಸಿಕೊಳ್ಳದೆ ಇದ್ದುದರಿಂದ ಮಹಿಳೆ ಜಗಳಕ್ಕೆ ಮುಂದಾಗುವ ಪರಿಸ್ಥಿತಿ ಇದೆ. ಮಹಿಳೆಯರು ಧೈರ್ಯ ಮತ್ತು ಸಂಯಮದಿಂದ ಉತ್ತಮ ಕೆಲಸ ಮಾಡಿ ಗುರಿ ತಲುಪಬೇಕೆಂದು ಹೇಳಿದರು.
ಶಿಕ್ಷಣ ಕಲಿತ ಹೆಣ್ಣು ಮಕ್ಕಳು ಗೃಹಿಣಿಯಾದ ಮಾತ್ರಕ್ಕೆ ಕಲಿಕೆ ನಷ್ಟವಾಗಬಾರದು. ಅವರು ಸಮಾಜ ಹಾಗೂ ಜನ ಸಂಪರ್ಕದಿಂದ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನು ಹೆಚ್ಚು ಓದಿದವಳಲ್ಲ. 10ನೆ ತರಗತಿವರೆಗೆ ಮಾತ್ರ ಓದಿದ್ದೇನೆ. ಆದರೆ, ಶಾಲೆಯಲ್ಲಿ ಪಡೆದ ಶಿಕ್ಷಣಕ್ಕಿಂತ ಅನುಭವದ ಮೂಲಕ ಹೆಚ್ಚು ಜ್ಞಾನ ಪಡೆದಿದ್ದೇನೆ ಎಂದು ಹೇಳಿದರು.
ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿ, ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಅಖಿಲ ಕರ್ನಾಟಕ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ವಿಮಲಾ, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಉಪಸ್ಥಿತರಿದ್ದರು.