ಕೋಲಾರ, ಮಾ.7- ಪಡಿತರ ಚೀಟಿ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ನೀಡಿದರೆ 400ರೂ. ಬಹುಮಾನ ಕೊಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಬಹುಮಾನ ಸ್ಕೀಂ ಎಂದು ಹೆಸರಿಟ್ಟಿದ್ದು, 10 ದಿನಗಳೊಳಗೆ ಇದು ಜಾರಿಗೆ ಬರಲಿದೆ ಎಂದು ತಿಳಿಸಿದರು.
ಯಾರೇ ಬಲಾಢ್ಯರಾಗಿರಲಿ ಪಡಿತರ ಚೀಟಿ ದುರ್ಬಳಕೆ ಮಾಡಿಕೊಂಡಿದ್ದರೆ ಅಂತಹವರ ಹೆಸರನ್ನು ತಮಗೆ ತಿಳಿಸಿದರೆ ಅವರಿಗೆ 400ರೂ. ಬಹುಮಾನ ನೀಡಲಾಗುತ್ತದೆ. ಅಲ್ಲದೆ, ಅವರ ಹೆಸರನ್ನುಗೌಪ್ಯವಾಗಿಡಲಾಗುತ್ತದೆ ಎಂದು ಹೇಳಿದರು.
ಆಹಾರ ಪದಾರ್ಥ ಅಕ್ರಮ ದಾಸ್ತಾನು ಮಾಡಿರುವ ಬಗ್ಗೆ ತಿಳಿಸಿದರೆ ದಾಸ್ತಾನಿನಲ್ಲಿ ಶೇ.20ರಷ್ಟು ಪದಾರ್ಥವನ್ನು ಮಾಹಿತಿ ನೀಡಿದವರಿಗೆ ಕೊಡಲಾಗುವುದು ಎಂದು ತಿಳಿಸಿದರು.
ಪಡಿತರ ಚೀಟಿ ತಪಾಸಣೆ ಹಾಗೂ ಅಂಗಡಿಗಳ ಪರಿಶೀಲನೆ ನಡೆಸಲು ಐದು ಜನರ ಸದಸ್ಯರುಳ್ಳ ವಿಜಿಲೆನ್ಸ್ ಪಂಚಪೀಠ ಸಮಿತಿ ರಚಿಸಲಾಗುತ್ತದೆ. ಇದು ಒಂದು ವಾರದಲ್ಲಿ ಜಾರಿಗೆ ಬರಲಿದೆ. ನಂತರ ರಾಜ್ಯಾದ್ಯಂತ ಎಲ್ಲೆಡೆ ತಪಾಸಣೆ ಕಾರ್ಯ ಭರದಿಂದ ನಡೆಯಲಿದೆ ಎಂದು ವಿವರಿಸಿದರು.
ಹಸಿವು ಮುಕ್ತ ಸಮಾಜ ಮಾಡುವುದೇ ನಮ್ಮ ಸರ್ಕಾರದ ಗುರಿಯಾಗಿದೆ. ಯಾವ ಪಕ್ಷವನ್ನು ಮುಕ್ತ ಮಾಡುವುದಲ್ಲ, ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದರೇ ನಮಗೆ ಒಳಿತು ಎಂದು ಹೇಳಿದರು.
ನಾವು ತಂದಿರುವ ಇಂತಹ ಉತ್ತಮ ಯೋಜನೆಗಳನ್ನು ನಿಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ತನ್ನಿ ಎಂದು ಬಿಜೆಪಿಯವರಿಗೆ ಯು.ಟಿ.ಖಾದರ್ ಸಲಹೆ ನೀಡಿದರು.
ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪಡಿತರ ಸೋರಿಕೆಯಾಗುವುದನ್ನು ತಡೆಗಟ್ಟಿದ್ದೇವೆ ಎಂದರು.
ವಸತಿ ಮತುತಿ ಆಹಾರ ಉಚಿತವಾಗಿ ನೀಡುತ್ತಿರುವ ಸಂಸ್ಥೆಗಳಿಗೆ ಅನ್ನಭಾಗ್ಯ ಯೋಜನೆಯಡಿ ದವಸ ನೀಡುತ್ತಿದ್ದೇವೆ. ಕೋಲಾರ ಜಿಲ್ಲೆಯಲ್ಲಿ ಇಂತಹ 9 ಸಂಸ್ಥೆಗಳಿವೆ. 180 ಜನ ಫಲಾನುಭವಿಗಳಿದ್ದಾರೆ. ತಲಾ 10 ಕೆಜಿ ಅಕ್ಕಿ, 5 ಕೆಜಿ ಗೋಧಿ ನೀಡುತ್ತಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಖಾದರ್ ತಿಳಿಸಿದರು.