ಮಂಗಳೂರು, ಮಾ.6-ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಬೆಂಬಲಕ್ಕೆ ನಾವು ಅರ್ಜಿ ಹಾಕಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಅಗತ್ಯವಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯನವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಬೆಂಬಲ ನೀಡಿ ಎಂದು ನಾವು ನಿಮಗೆ ಅರ್ಜಿ ಹಾಕಿಲ್ಲ. ಬಿಬಿಎಂಪಿ ಬೆಂಬಲ ಕೋರಿ ನಮ್ಮ ಮನೆಗೆ ಬಂದವರು ನೀವು. ನಿಮ್ಮ ದುರಾಹಂಕಾರ ನಿಲ್ಲಿಸಿ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಬೆಂಕಿ ಹಚ್ಚುವ ಕಾರ್ಯಕ್ರಮ ಅದಕ್ಕೆ ಅನುಮತಿ ಸಿಗುತ್ತದೆ. ಜೆಡಿಎಸ್ ಪಕ್ಷ ಸೌಹಾರ್ದ ಯಾತ್ರೆ ಮಾಡಿದರೆ ಅನುಮತಿ ನೀಡುವುದಿಲ್ಲ. ಇಲ್ಲಿನ ಅಧಿಕಾರಿಗಳು ಮೂರು ತಿಂಗಳ ನಂತರ ಬದಲಾವಣೆಯಾಗುತ್ತಾರೆ. ಅಮಾಯಕರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ರಾಜಕೀಯ ಪಕ್ಷಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಎಚ್ಡಿಕೆ ವ್ಯಂಗ್ಯ: ಕರ್ನಾಟಕದ ಬಿಜೆಪಿಯವರು ಭೋಗಿಗಳಾಗಿದ್ದರಿಂದ ಯೋಗಿ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಚೆಕ್ ಮೂಲಕ ಲಂಚ ಸೇರಿದಂತೆ ಹಲವು ಭ್ರಷ್ಟಾಚಾರವನ್ನು ಬಿಜೆಪಿಯವರು ಮಾಡಿದ್ದರು ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆಯೇ, ಇಲ್ಲಿನ ನಾಯಕರ ಮೇಲೆ ವಿಶ್ವಾಸವಿಲ್ಲವೇ? ಉತ್ತರ ಪ್ರದೇಶ ಮಕ್ಕಳ ಸಾವನ್ನು ತಪ್ಪಿಸಲಾಗದವರಿಂದ ಜನಸುರಕ್ಷಾ ಯಾತ್ರೆಯೇ? ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ಬಂದ ಮಕ್ಕಳನ್ನು ರಕ್ಷಿಸಲಾಗದ ಮುಖ್ಯಮಂತ್ರಿ ಯೋಗಿ ಅವರು, ನಮ್ಮ ರಾಜ್ಯದಲ್ಲಿ ಯಾವ ರೀತಿಯ ಸುರಕ್ಷಾ ಯಾತ್ರೆ ಮಾಡುತ್ತಾರೆ ಎಂದು ಹೇಳಿದರು.
ಗುಜರಾತ್ನ ಪಠಾಣ್ ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಾನೂನು ಮೀರಿ ಬೇರೆಯವರಿಗೆ ನೀಡಲಾಗುತ್ತಿದೆ. ಯಾತ್ರೆ, ಯೋಜನೆ ಹೆಸರುಗಳನ್ನು ಮಾತ್ರ ಚೆನ್ನಾಗಿಟ್ಟಿದ್ದಾರೆ. ಇಂಗ್ಲೀಷ್ ಮಾಧ್ಯಮಗಳು ಇಂತಹ ವಿಷಯದ ಬಗ್ಗೆ ಧ್ವನಿ ಎತ್ತುವುದಿಲ್ಲ. ತಮ್ಮ ರಾಜಕೀಯ ತೆವಲಿಗಾಗಿ ಹಿಂದೂ-ಮುಸ್ಲಿಂ ಕಂದಕ ಸೃಷ್ಟಿ ಮಾಡಿದ್ದಾರೆ. ಕರಾವಳಿ ಭಾಗದ ಜನರ ಜೀವದ ಜೊತೆ ಚೆಲ್ಲಾಟ ನಡೆಸುವವರಿಗೆ ಬೆಂಬಲ ನೀಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಭಿವೃದ್ಧಿ ವಿಷಯಗಳ ಬಗ್ಗೆ ಮಹತ್ವ ನೀಡುತ್ತಿಲ್ಲ. ವಾಮಮಾರ್ಗದಲ್ಲಿ ಹೋಗುತ್ತಿವೆ. ಬಿಜೆಪಿಯು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಆಪಾದಿಸುತ್ತಿದೆ. ಗೃಹ ಸಚಿವರು ಹಿಂದೂ-ಮುಸ್ಲಿಮರ ಹತ್ಯೆ ಪಟ್ಟಿ ನೀಡಿದ್ದಾರೆ. ಈ ಎರಡೂ ಪಕ್ಷಗಳಿಂದ ಕರಾವಳಿ ಜನರು ಆತಂಕದಲ್ಲಿದ್ದಾರೆ. ಬೆಳಗ್ಗೆ ಮನೆಯಿಂದ ಹೊರಟವರು ವಾಪಸ್ ಬರುವ ಬಗ್ಗೆ ಅನುಮಾನವಿದೆ. ಇಂತಹ ಪಕ್ಷಗಳ ನಾಯಕತ್ವ ನಮಗೆ ಬೇಕೇ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ಖೇಣಿ ಕಾಂಗ್ರೆಸ್ ಸೇರ್ಪಡೆ ಸಂಬಂಧ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ವಿರೋಧವಿದೆ. ಇದಕ್ಕಿಂತ ಕೆಟ್ಟ ನಿರ್ಧಾರ ಮತ್ತೊಂದಿಲ್ಲ. ನೈಸ್ ಹಗರಣದ ಬಗ್ಗೆ ಸದನ ಸಮಿತಿ ವರದಿ ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.
ಸಚಿವ ರಮೇಶ್ಕುಮಾರ್ ಅವರು ಲಂಚ ತೆಗೆದುಕೊಳ್ಳುವುದು ತಪ್ಪಲ್ಲ, ಆದರೆ ಬೇರೆಯವರಿಗೆ ತಿಳಿಯದ ರೀತಿ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಇದಕ್ಕೆ ಮುಖ್ಯಮಂತ್ರಿಗಳು ಮೌನ ವಹಿಸಿದ್ದರು. ಇದನ್ನು ಗಮನಿಸಿದರೆ ಇವರ ಆಡಳಿತ ಹೇಗಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.