ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಟೀಕೆಗಳು ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಮಾ.6- ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ಖೇಣಿ ಕಾಂಗ್ರೆಸ್ ಸೇರ್ಪಡೆಯ ಬೆನ್ನಲ್ಲೇ ಗೊಂದಲಗಳು ಹೆಚ್ಚಾಗಿದ್ದು, ಪಕ್ಷದ ನಾಯಕರು ಅಂತರಂಗದಲ್ಲಿ ದುಗುಡ ತೋಡಿಕೊಳ್ಳುತ್ತಿದ್ದರೆ, ಬಹಿರಂಗವಾಗಿ ಬಲವಾದ ಸಮರ್ಥನೆಗಿಳಿದಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಖೇಣಿ ಸೇರ್ಪಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಾವು ಬಿಜೆಪಿಯವರಂತೆ ಜೈಲಿಗೆ ಹೋಗಿ ಬಂದವರನ್ನು ಸೇರಿಸಿಕೊಂಡಿಲ್ಲ. ಅಶೋಕ್ ಖೇಣಿ ಶಾಸಕರು ಮಾತ್ರ. ಬಿಜೆಪಿಯಲ್ಲಿ ಭ್ರಷ್ಟಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಿಲ್ವೆ ಎಂದು ಪ್ರಶ್ನಿಸಿದ್ದಾರೆ.
ಗಣಿ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದ ಜನಾರ್ದನ ರೆಡ್ಡಿ ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಹೀಗಿರುವಾಗ ಅಶೋಕ್ ಖೇಣಿ ಸೇರ್ಪಡೆ ಬಗ್ಗೆ ಟೀಕೆಗಳು ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದರು.
ಆದರೆ ಇಂದು ಬೆಳಗ್ಗೆ ದೆಹಲಿಗೆ ತೆರಳುವ ಮುನ್ನಾ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ ಸಿದ್ದರಾಮಯ್ಯ ಅವರು, ಚುನಾವಣೆ ಮುಗಿಯುವವರೆಗೂ ಅಶೋಕ್ ಖೇಣಿ ಅವರನ್ನು ಪಕ್ಷದ ಪ್ರಮುಖ ವೇದಿಕೆಗಳಲ್ಲಿ ಕಾಣಿಸಿಕೊಳ್ಳದಂತೆ ನಿಯಂತ್ರಿಸುವಂತೆ ಸೂಚಿಸಿದ್ದಾರೆ.
ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ನಂತರ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಶ್ಚಾತ್ತಾಪ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯವಾಗಿ ಈ ಮಟ್ಟಿನ ವಿರೋಧ ವ್ಯಕ್ತವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಖೇಣಿ ಅವರನ್ನು ಪಕ್ಷದ ಚಟುವಟಿಕೆಗಳಿಂದ ಹಾಗೂ ವೇದಿಕೆ ಕಾರ್ಯಕ್ರಮದಿಂದ ಆದಷ್ಟು ದೂರವಿಡಿ. ಅವರು ಪಕ್ಷದ ಸಹ ಸದಸ್ಯರಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ಅವರ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೀದರ್ ಸೇರಿದಂತೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಾಕಷ್ಟು ಪಶ್ಚಾತ್ತಾಪ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅನಗತ್ಯವಾಗಿ ಚುನಾವಣಾ ಸಂದರ್ಭದಲ್ಲಿ ಈ ವಿರೋಧ ಏಕೆ ಕಟ್ಟಿಕೊಳ್ಳಬೇಕು. ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.