ಮೈಸೂರು, ಮಾ.6-ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ತಾಕತ್ತಿದ್ದರೆ ಚಾಮುಂಡೇಶ್ವರಿಯಲ್ಲಿ ಗೆದ್ದು ಬರಲಿ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕಡೆಗಣಿಸಿರುವ ನಿಮ್ಮ ಬಳಿ ನಾನೇಕೆ ಬಹಿರಂಗ ಚರ್ಚೆಗೆ ಹೋಗಬೇಕು. ಯಾವ ಒಳ್ಳೆಯ ಕೆಲಸವನ್ನು ನೀವು ಮಾಡಿದ್ದೀರಿ. ಅಭಿವೃದ್ಧಿಯಲ್ಲಿ ರಾಜ್ಯ ಪಾತಾಳಕ್ಕೆ ಹೋಗಿದೆ. ಖಜಾನೆಗೆ ಬಂದ ಪ್ರತಿ ಹಣಕ್ಕೂ ಕಮೀಷನ್ ಪಡೆದಿದ್ದೀರಿ ಎಂದು ಹರಿಹಾಯ್ದರು.
ಅಂಥವರ ಜೊತೆ ನಾವೇಕೆ ಚರ್ಚೆಗೆ ಹೋಗಬೇಕು. ಅವರು ಮಾಡಿರುವ ಹಗರಣಗಳ ಪಟ್ಟಿಯನ್ನೇ ಬಿಡುಗಡೆ ಮಾಡಲಿದ್ದೇವೆ. ಸಿದ್ದರಾಮಯ್ಯ ಅವರ ಬಗ್ಗೆ ಜಾರ್ಜ್ಶೀಟ್ ಬಿಡುಗಡೆ ಮಾಡಲಿದ್ದೇವೆ. ಅವರಿಗೆ ಮಾನ-ಮರ್ಯಾದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಪ್ರಧಾನಿ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಪ್ರಧಾನಿಯವರಿಗೆ ಕಾಂಗ್ರೆಸ್ ಮುಕ್ತ ಭಾರತ ಮಾಡುವ ಉದ್ದೇಶವಿದೆ. ಅದೇ ರೀತಿ ನಮಗೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಉದ್ದೇಶವಿದೆ ಎಂದು ಹೇಳಿದರು.
ರಾಹುಲ್ಗಾಂಧಿಯವರನ್ನು ಮೈಸೂರು, ಚಾಮರಾಜನಗರಕ್ಕೆ ಹೆಚ್ಚು ಹೆಚ್ಚು ಕರೆತನ್ನಿ. ನಮಗೆ ಇದರಿಂದ ಅನುಕೂಲ. ರಾಹುಲ್ಗಾಂಧಿ ಕಾಲಿಟ್ಟ ಕಡೆಯೆಲ್ಲ ಕಾಂಗ್ರೆಸ್ ಸೋತಿದೆ. ನಾವು ಗೆಲ್ಲುತ್ತೇವೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ತ್ರಿಪುರಾ, ಮೇಘಾಲಯ, ನ್ಯಾಗಾಲ್ಯಾಂಡ್ಗಳಲ್ಲಿ ನಡೆದಿರುವ ಚುನಾವಣೆಯಾಗಿದೆ. ಈ ಫಲಿತಾಂಶ ನಿಮ್ಮ ಕಣ್ಮುಂದೆಯೇ ಇದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ಎಂಥ ಭ್ರಷ್ಟರೂ ಇರಬಹುದಾಗಿದೆ. ರೈತರಿಗೆ ಮೋಸ ಮಾಡಿರುವ ಅಶೋಕ್ ಖೇಣಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಗೊತ್ತೇ ಇದೆ. ಇಂತಹ ಭ್ರಷ್ಟರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೂ ಭ್ರಷ್ಟರನ್ನೇ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಗುರುತು ಏನೆಂಬುದು ಇದರಿಂದ ತಿಳಿಯುತ್ತದೆ. ಈ ಬಾರಿ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ಗೆ ಸಿದ್ದರಾಮಯ್ಯ ಕೊನೆಯ ಮುಖ್ಯಮಂತ್ರಿ. ಮುಂದೆ ರಾಜ್ಯದಲ್ಲಿ ಬಿಜೆಪಿಯದೇ ಆಡಳಿತ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಉಪೇಂದ್ರ ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ನುಡಿದರು.