ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ – ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ಮಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ನೆಹರು ಮೈದಾನದಲ್ಲಿಂದು ಜನಸುರಕ್ಷಾ ರ್ಯಾಲಿ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ನರಹಂತಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರಹಂತಕ ಚಿರತೆ, ಹುಲಿ, ಸಿಂಹ, ವೀರಪ್ಪನ್ ನಂತಹವರನ್ನು ನೋಡಿದ್ದೇವೆ. ಈಗ ನರಹಂತಕ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದೇವೆ ಎಂದು ಸಂಸದರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಚುನಾವಣಾ ಸಂದರ್ಭದಲ್ಲಿ ಇದೇ ರೀತಿ ವಾಗ್ದಾಳಿ ನಡೆಸಿದ್ದರು. ಮೋದಿ ಅವರನ್ನು ನರಹಂತಕ ಎಂದು ಹೇಳಿದ್ದರು. ಈ ವಿಷಯ ತೀವ್ರ ಚರ್ಚೆಗೂ ಗ್ರಾಸವಾಗಿತ್ತು.
ಗೋದ್ರಾ ಘಟನೆಯನ್ನು ಮುಂದಿಟ್ಟುಕೊಂಡು ಹರಿಹಾಯ್ದಿದ್ದ ಸಿದ್ದರಾಮಯ್ಯ ನರಹಂತಕ ಪದಪ್ರಯೋಗ ಮಾಡಿದ್ದರು. ಈಗ ಹತ್ಯೆ ಘಟನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ಸಿದ್ದರಾಮಯ್ಯನವರ ವಿರುದ್ಧ ನರಹಂತಕ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ಸಂಸದ ಪ್ರತಾಪ್‍ಸಿಂಹ ಅವರು ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ಈಗ ನಳೀನ್‍ಕುಮಾರ್ ಕಟೀಲ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ತಪ್ಪಿದ ಅವಘಡ:
ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲಿ ವಂದೇ ಮಾತರಂ ಗೀತೆ ಹಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಕೂಡಲೇ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿ ಅವಘಡವನ್ನು ತಪ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳೀನ್‍ಕುಮಾರ್ ಕಟೀಲ್ ಅವರು, ಬಿಜೆಪಿಯವರು ಬೆಂಕಿ ಹಾಕುತ್ತಾರೆ ಎಂದು ಕಾಂಗ್ರೆಸ್‍ನವರು ಹೇಳುತ್ತಾರೆ. ಈಗ ಕಾಂಗ್ರೆಸ್‍ನವರು ಹಾಕಿರುವ ಬೆಂಕಿಯನ್ನು ನಾವೇ ಆರಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ