ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಿ
ಬೆಂಗಳೂರು, ಮಾ.6- ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಿಸಿದ್ದು, ಬೀದರ್ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದಿವೆ. ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರ ಅಳಿಯ ಚಂದ್ರಸಿಂಗ್ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕ್ಷೇತ್ರಕ್ಕೆ ಒಂದು ದಿನವೂ ಕಾಲಿಡದೆ ಚುನಾವಣಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದು ದಿಢೀರ್ ಎಂದು ಕಾಂಗ್ರೆಸ್ ಸೇರಿರುವ ಅಶೋಕ್ ಖೇಣಿ ವರ್ತನೆ ವಿರುದ್ಧ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿದ್ದ ಖೇಣಿ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ಈವರೆಗೂ ಯಾವುದೇ ಕಾಳಜಿ ವಹಿಸಲಿಲ್ಲ. ಚುನಾವಣೆಗೋಷ್ಕರ ಪಕ್ಷ ಸೇರಿದ್ದಾರೆ.
ಕ್ಷೇತ್ರದ ಜನರ ಪರಿಚಯವೂ ಕೂಡ ಅವರಿಗೆ ಇಲ್ಲ. ಬೀದರ್ ದಕ್ಷಿಣ ಕ್ಷೇತ್ರದ 10 ಗ್ರಾಮಗಳ ಹೆಸರು ಹೇಳಲಿ ಎಂದು ಈ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದ ಚಂದ್ರಸಿಂಗ್ ಅವರು ಹೇಳಿದ್ದಾರೆ.
ಖೇಣಿ ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಇಂತಹ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಬೀದರ್ನಲ್ಲಷ್ಟೇ ಅಲ್ಲದೆ ರಾಜ್ಯದ ಎಲ್ಲಾ ಭಾಗದಲ್ಲೂ ಈ ನಿರ್ಧಾರದಿಂದ ಏಟು ಬೀಳಲಿದೆ. ಈ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಬೀದರ್ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.