ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮ್ಮದ್ ವಿರುದ್ಧ ಜೆಡಿಎಸ್ ನಿಂದ ಅಲ್ತಾಫ್‍ಗೆ ಟಿಕೆಟ್
ಬೆಂಗಳೂರು,ಮಾ.5- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರನ್ನು ಸೋಲಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಕಡುವೈರಿ ಅಲ್ತಾಫ್ ಅವರಿಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.
ಪಕ್ಷಕ್ಕೆ ಕೈಕೊಟ್ಟು ಹೊರ ಹೋಗಿರುವ ಏಳು ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ತಂತ್ರ ರೂಪಿಸುತ್ತಿರುವ ದೇವೇಗೌಡರು ಈಗಾಗಲೇ ಮಾಗಡಿಯಲ್ಲಿ ಬಾಲಕೃಷ್ಣ ಅವರ ಬದಲಿಗೆ ಕಾಂಗ್ರೆಸ್‍ನಿಂದ ವಲಸೆ ಬಂದ ಎ.ಮಂಜು ಅವರಿಗೆ ಟಿಕೆಟ್ ನೀಡಿದ್ದಾರೆ.
ಇದೇ ರೀತಿ ಚಾಮರಾಜಪೇಟೆಯಲ್ಲಿ ಜಮೀರ್ ಅವರ ವಿರುದ್ಧ ಅವರ ಬಲಗೈ ಭಂಟ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ಅವರಿಗೆ ಟಿಕೆಟ್ ನೀಡಿ ಗುರುವನ್ನೇ ಮಣಿಸುವ ತಂತ್ರ ರೂಪಿಸಿದ್ದ ಗೌಡರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿ ಜಮೀರ್ ಅವರ ಕಡುವೈರಿ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್‍ನ ಅಲ್ತಾಫ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಅಲ್ತಾಫ್ ಸಹೋದರನ ವಿವಾಹ ಸಮಾರಂಭದಲ್ಲಿ ದೇವೇಗೌಡರು ಕಾಣಿಸಿಕೊಳ್ಳುತ್ತಿದ್ದಂತೆ ಚಾಮರಾಜಪೇಟೆಯಲ್ಲಿ ಅಲ್ತಾಫ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್‍ನಲ್ಲಿದ್ದ ಅಲ್ತಾಫ್ ಅವರು ಜಮೀರ್ ಅಹಮ್ಮದ್ ಖಾನ್ ಕೈ ಪಾಳಯ ಸೇರಿಕೊಳ್ಳುತ್ತಿದ್ದಂತೆ ಪಕ್ಷ ತೊರೆಯಲು ತೀರ್ಮಾನಿಸಿದ್ದರು ಎನ್ನಲಾಗಿದೆ. ಹೀಗಾಗಿ ಜಮೀರ್ ವಿರುದ್ದ ತೊಡೆತಟ್ಟುವ ಸಾಮಥ್ರ್ಯ ಹೊಂದಿರುವ ಅಲ್ತಾಫ್ ಅವರನ್ನೇ ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿದರೆ ತಮ್ಮ ಶಪಥ ಪೂರೈಸಿಕೊಳ್ಳಬಹುದು ಎನ್ನುವುದು ದೊಡ್ಡ ಗೌಡರ ಲೆಕ್ಕಾಚಾರವಾಗಿದೆ.
ಇನ್ನು ಹಲವಾರು ಬಿಜೆಪಿ ಮತ್ತು ಕಾಂಗ್ರೆಸ್‍ನ ಮುಖಂಡರು ಜೆಡಿಎಸ್ ಸೇರುವ ಸಾಧ್ಯತೆಯಿದೆ.