ಕಾನ್ಪುರ, ಮಾ.5-ಬಣ್ಣಗಳ ಹಬ್ಬ ಹೋಳಿ ಸಂದರ್ಭದಲ್ಲಿ ನಡೆಸಲಾಗುವ ಹೋಳಿಕಾ ದಹನ್ (ಕಾಮದಹನ) ವೇಳೆ 35 ವರ್ಷದ ಮಾನಸಿಕ ಅಸ್ವಸ್ಥೆಯೊಬ್ಬರು ದುರಂತ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಗುಲೌಲಿ ಗ್ರಾಮದಲ್ಲಿ ಸಂಭವಿಸಿದೆ.
ಬೆಂಕಿ ಹಚ್ಚಲು ರಾಶಿ ಹಾಕಲಾಗಿದ್ದ ವಸ್ತುಗಳ ಮಧ್ಯೆ ಅಡಗಿ ಕುಳಿತ್ತಿದ್ದ ಸೀಮಾ ದೇವಿ ಎಂಬ ಮಹಿಳೆ ಹೋಳಿಕಾ ದಹನ್ ವೇಳೆ ಜೀವಂತ ಸುಟ್ಟು ಹೋಗಿದ್ದಾಳೆ. ಹೋಳಿಕಾ ದಹನ್ ನಡೆದ ಎರಡು ದಿನಗಳ ನಂತರ ಸೀಮಾ ದೇವಿಯ ಸುಟ್ಟು ಕರಕಲಾದ ಅವಶೇಷಗಳು ಪತ್ತೆಯಾಯಿತು. ಈ ಆಚರಣೆ ನಡೆಯುವುದಕ್ಕೂ ಮುನ್ನ ಆ ಸ್ಥಳದ ಬಳಿ ಈಕೆ ಇದ್ದದ್ದನ್ನು ಗ್ರಾಮಸ್ಥರು ಗಮನಿಸಿದ್ದರು. ಮಾನಸಿಕ ಅಸ್ವಸ್ಥೆಯಾಗಿದ್ದ ಸೀಮಾ ಸುಡಲು ರಾಶಿಹಾಕಲಾಗಿದ್ದ ವಸ್ತುಗಳ ಒಳಗೆ ಬಚ್ಚಿಟ್ಟುಕೊಂಡಿದ್ದಳು. ಆಕೆ ಒಳಗೆ ಇರುವುದನ್ನು ತಿಳಿಯದೇ ಗ್ರಾಮಸ್ಥರು ಕಾಮದಹನ ಆಚರಿಸಿದ್ದರು.
ಎರಡು ದಿನಗಳಿಂದ ಸೀಮಾ ಗ್ರಾಮದಿಂದ ನಾಪತ್ತೆಯಾಗಿದ್ದಳು. ಶನಿವಾರ ಬೂದಿಯನ್ನು ಸಂಗ್ರಹಿಸುತ್ತಿದ್ದಾಗ ಆಕೆಯ ಅವಶೇಷಗಳು ಪತ್ತೆಯಾದವು. ಈ ಘಟನೆಯಿಂದ ಗ್ರಾಮಸ್ಥರು ಮಮ್ಮಲ ಮರಗಿದರು. ಆಚಾತುರ್ಯದಿಂದ ಆದ ದುರಂತಕ್ಕಾಗಿ ಕೊರಗಿದರು.
ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಉಸಿರುಗಟ್ಟಿ ನಂತರ ಬೆಂಕಿಯಿಂದ ದಹಿಸಿ ಸೀಮಾದೇವಿ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.