ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು 1985 ಮತಗಳನ್ನು ಪಡೆದು ದ್ವಿಗಿಜಯ ಸಾಧಿಸುವ ಮೂಲಕ ಸತತ 17 ನೇ ಬಾರಿಗೆ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರೆ, ಇದೇ ಮೊದಲ ಬಾರಿಗೆ ಪಾಪು ಅವರ ಎದುರಾಳಿಯಾಗಿದ್ದ ನಿವೃತ್ತ ಪ್ರಾಚಾರ್ಯ ಬಿ.ಎಸ್. ಶಿರೋಳ ಅವರು 1228 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಇವರಿಗೆ ನಾಡೋಜ ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ್ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದರೂ ಪಾಪು ಅವರನ್ನು ಹಣಿಯಲು ಸಾಧ್ಯವಾಗಲಿಲ್ಲ. ಇದೇ ವೇಳೆ ನಾಡೋಜ ಪಾಟೀಲ ಪುಟ್ಟಪ್ಪ ಅವರಿಗೆ ದೇಹವಷ್ಟೇ ಅಲ್ಲ ತಲೆಯೂ ಸರಿಯಿಲ್ಲ ಎಂದಿದ್ದ ಸಮಾನ ಮನಸ್ಕ ವೇದಿಕೆಯ ಡಿ.ಎಂ. ಹಿರೇಮಠ, ಶಂಕರ ಹಲಗತ್ತಿ ಹಾಗೂ ಡಾ. ಸಂಜೀವ ಕುಲಕರ್ಣಿ ಅವರ ಬಣ ತೀವ್ರ ಮುಖಭಂಗ ಅನುಭವಿಸಿದೆ. ಸಮಾನ ಮನಸ್ಕ ವೇದಿಕೆಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿಂಗಣ್ಣ ಕುಂಟಿ ಅವರು 1470 ಮತಗಳನ್ನು ಪಡೆದು ಆಯ್ಕೆಯಾದರೆ, ಶಿವಣ್ಣ ಕಾರಡಗಿ 528 ಹಾಗೂ ಪು ಬಣದ ಚಂದ್ರಶೇಖರ ಅಳಗುಂಡಗಿ 1196 ಅವರು ಸೋಲು ಅನುಭವಿಸಿದರು. ಪಾಪು ಬಣದಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ ಉಡಕೇರಿ 1522 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸಮಾನ ಮನಸ್ಕ ವೇದಿಕೆಯ ಶಂಕರ ಹಲಗತ್ತಿ 1341 ಹಾಗೂ ಸ್ವತಂತ್ರ ಅಭ್ಯರ್ಥಿ ಹನುಮಾಕ್ಷಿ ಗೋಗಿ 350 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು. ಪಾಪು ಬಣದಿಂದ ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸದಾನಂದ ಶಿವಳ್ಳಿ ಅವರು 1808 ಮತಗಳನ್ನು ಪಡೆದು ಆಯ್ಕೆಗೊಂಡರೆ, ಸಮಾನ ಮನಸ್ಕ ಬಣದ ವೀರಣ್ಣ ಒಡ್ಡಿನ 1369 ಅವರು ಸೋಲು ಅನುಭವಿಸಿದರು. ಪಾಪು ಬಣದಿಂದ ಕೋಶಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣ ಜೋಶಿ 2088 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸಂಜೀವ ಕುಲಕರ್ಣಿ 1137 ಮತಗಳನ್ನು ಪಡೆದು ಪರಾಭವಗೊಂಡರು. ಮಹಿಳಾ ಮೀಸಲಾತಿ ಸ್ಥಾನಕ್ಕೆ ಪ್ರಪುಲ್ಲಾ ನಾಯ್ಕ ಗೆಲುವು ಸಾಧಿಸಿದ್ದಾರೆ.
ಕೆಲ ಸ್ಥಾನಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.