ಏಕಲವ್ಯ ಪ್ರಶಸ್ತಿಯನ್ನು ಪ್ರಕಟ

ಉಡುಪಿರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ.

ಈ ಕುರಿತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಇಂದಿಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಏಕಲವ್ಯ ಪ್ರಶಸ್ತಿಗೆ 13 ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದ್ದು, ಸಾಧಕರಿಗೆ 2 ಲಕ್ಷ ರೂ. ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು ಎಂದು ಹೇಳಿದರು.

ಇದರೊಂದಿಗೆ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನೀಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ 9 ಮಂದಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಕ್ರೀಡೆಯನ್ನು ಪೋಷಿಸುವ ಕ್ರೀಡಾ ಪ್ರವರ್ತಕರಿಗಾಗಿ 2017-18ನೇ ಸಾಲಿನಿಂದ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ರಾಜ್ಯಾದ್ಯಂತ 10 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರಶಸ್ತಿಗಳ ವಿವರವನ್ನು ಸೋಮವಾರ ಪ್ರಕಟಿಸಿದರು.

ಏಕಲವ್ಯ ಪ್ರಶಸ್ತಿ ವಿಜೇತರು
ಎಸ್‌.ಹರ್ಷಿತ (ಅಥ್ಲೆಟಿಕ್), ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೆಟ್ ಬಾಲ್‌), ಪೂರ್ವಿಷಾ ಎಸ್‌. ರಾಮ್ (ಬ್ಯಾಡ್ಮಿಂಟನ್‌), ರೇಣುಕಾ ದಂಡಿನ್‌ (ಸೈಕ್ಲಿಂಗ್‌), ಮಯೂರ್ ಡಿ. ಭಾನು(ಶೂಟಿಂಗ್‌), ಎ.ಕಾರ್ತಿಕ್‌ (ವಾಲಿಬಾಲ್‌), ಮಾಳವಿಕ ವಿಶ್ವನಾಥ್(ಈಜು), ಟಿ.ಕೆ.ಕೀರ್ತನಾ (ರೋಯಿಂಗ್), ಎಂ.ಬಿ.ಅಯ್ಯಪ್ಪ (ಹಾಕಿ), ಸುಕೇಶ್‌ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ಸಂದೀಪ್ ಬಿ. ಕಾಟೆ(ಕುಸ್ತಿ) ಹಾಗೂ ಎಂ.ರೇವತಿ ನಾಯಕ (ಪ್ಯಾರಾ ಈಜುಪಟು).

ಬೆಂಗಳೂರಿನ ಗುರುನಾನಕ ಭವನದಲ್ಲಿ ಮಾರ್ಚ್​ 7 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಏಕಲವ್ಯ ಸೇರಿ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಹಾಗೂ ಕ್ರೀಡಾ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ