ಭಾರತದ ಶೂಟರ್ ಶಹಜಾರ್ ರಿಜ್ವಿಗೆ ಚಿನ್ನ

ಮೆಕ್ಸಿಕೋ ಸಿಟಿ, ಮಾ.4-ಭಾರತದ ಶೂಟರ್ ಶಹಜಾರ್ ರಿಜ್ವಿ ತಮ್ಮ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಭಾರತದ ಪ್ರತಿಭಾವಂತ ಶೂಟರ್‍ಗಳಾದ ಜೀತು ರಾಯ್ ಮತ್ತು ಮೆಹುಲಿ ಘೋಷ್ ತಲಾ ಒಂದೊಂದು ಕಂಚು ಪದಕ ಗಳಿಸಿರುವುದು ಮತ್ತೊಂದು ಸಾಧನೆಯಾಗಿದೆ.
ಮೆಕ್ಸಿಕೋದ ಗ್ವಾಡಲಜಾರಾದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‍ನಲ್ಲಿ ಮೀರತ್ ಮೂಲಕ ರಿಜ್ವಿ 242.3 ಪಾಯಿಂಟ್‍ಗಳ ವಿಶ್ವದಾಖಲೆಯ ಸ್ಕೋರ್‍ನೊಂದಿಗೆ ಒಲಿಂಪಿಕ್ ಚಾಂಪಿಯನ್ ಜರ್ಮನಿಯ ಕ್ರಿಶ್ಚಿಯನ್ ರೀಟ್ಜ್(239.7) ಅವರನ್ನು ಮಣಿಸಿ ಸುವರ್ಣ ಪದಕದೊಂದಿಗೆ ಹೊಸ ವಿಕ್ರಮದ ಮುಕುಟ ಧರಿಸಿದರು.
ಭಾರತದ ಮತ್ತೊಬ್ಬ ಪ್ರತಿಭಾವಂತ ಪಿಸ್ತೂಲ್ ಶೂಟರ್ ಜಿತು ರಾಯ್ ಇದೇ ಸ್ಪರ್ಧೆಯಲ್ಲಿ 2019 ಅಂಕಗಳೊಂದಿಗೆ ಕಂಚಿನ ಪದಕ ಗಳಿಸಿದರು. ಈ ಸ್ಪರ್ಧೆಯಲ್ಲಿ ಭಾರತದ ಮೂವರು ಫೈನಲ್ ತಲುಪಿದ್ದರು. ಮತ್ತೊಬ್ಬ ಶೂಟರ್ ಓಂ ಪ್ರಕಾಶ್ ಮಿತರ್‍ವಾಲ್ 198.4 ಪಾಯಿಂಟ್‍ಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಬೇಕಾಯಿತು.
ಮಹಿಳೆಯರ ವಿಭಾಗದಲ್ಲಿ ಮೆಹುಲಿ ಘೋಷ್ ಮತ್ತೊಂದು ಪದಕ ಗಳಿಸಿಕೊಟ್ಟರು. 10 ಮೀಟರ್ ಏರ್ ರೈಫಲ್ ಶೂಟಿಂಗ್‍ನಲ್ಲಿ ಕಂಚಿನ ಪದಕ ಗೆದ್ದರು.
ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನ ಮೊದಲ ದಿನವೇ ಒಂದು ಚಿನ್ನ ಮತ್ತು ಎರಡು ಕಂಚು ಪದಕಗಳೊಂದಿಗೆ ಭಾರತ ಶುಭಾರಂಭ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ