ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ: ಶಾಸಕ ರಾಜಣ್ಣ ಭವಿಷ್ಯ
ತುಮಕೂರು,ಮಾ.4- ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಮಧುಗಿರಿ ಶಾಸಕ ರಾಜಣ್ಣ ಭವಿಷ್ಯ ನುಡಿದಿದ್ದಾರೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ರಾಜಣ್ಣ ನಡುವೆ ಅಸಮಾಧಾನ ಇದೆ ಎಂಬುದು ಬಹಿರಂಗಗೊಂಡಿದೆ.
ಮುಂದೊಂದು ದಿನ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಮುಖ್ಯಮಂತ್ರಿಗಳ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರೂ ಇದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ರಾಜಣ್ಣ ವಿವಾದ ಹುಟ್ಟುಹಾಕಿದ್ದಾರೆ.
ಡಿಕೆಶಿ ಪರ ರಾಜಣ್ಣ ಬ್ಯಾಟಿಂಗ್ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಧುಗಿರಿಯ ಬಡವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ, ಅವರ ಸಮುದಾಯದ ಕೆಲವರು ಅವರ ಕಾಲನ್ನು ಎಳೆಯುತ್ತಿದ್ದಾರೆ. ಶಿವಕುಮಾರ್ ಅವರಲ್ಲಿ ಧೈರ್ಯ, ಛಲ, ಛಾತಿ ಎಲ್ಲವೂ ಇದೆ. ಹೇಡಿಗಳಿಗೆ ಅಧಿಕಾರ ಕೊಟ್ಟರೆ ಪ್ರಯೋಜನವಾಗುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಎದೆಗಾರಿಕೆ, ತಾಕತ್ತು ಇರುವಂತಹ ಡಿಕೆಶಿಗೆ ಅಧಿಕಾರ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಅವರು ಮುಖ್ಯಮಂತ್ರಿಯಾದರೆ ನಾನು ಕೂಡ ಸಚಿವ ಆಗುತ್ತೇನೆ ಎಂದು ಶಾಸಕ ರಾಜಣ್ಣ ತಮ್ಮ ಮನದಾಳವನ್ನು ಬಿಚ್ಚಿಟ್ಟಿರುವ ವಿಷಯ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.