ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ್ತ
ಬೆಂಗಳೂರು, ಮಾ.4-ಮುಂದಿನ 2018-19ನೇ ವರ್ಷದ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ವ್ಯಾಸಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರಗಳನ್ನು ವಿತರಿಸಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ರಾತ್ರಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಇದರಿಂದ ರಾಜ್ಯದ 52 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಬ್ಬಿಣ ಅದಿರು ನಿಕ್ಷೇಪಗಳ ಮೀಸಲಾತಿಗಾಗಿ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ ) ಕಾಯಿದೆ 1957 ರ ಪರಿಚ್ಚೇಧ 17(2) (ಎ) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ, ಗಣಿಗಾರಿಕಾ ಪರವಾನಗಿ ನೀಡಲು ಸಂಪುಟ ನಿರ್ಧರಿಸಿದೆ.
ಕರ್ನಾಟಕ ಲೋಕ ಸೇವಾ ಆಯೋಗವು 2017 ಮೇ 12ರಂದು ಅಧಿಸೂಚಿಸಿರುವ ಗೆಜೆಟೆಡ್ ಪೆÇ್ರಬೇಷನರ್ಸ್ ಪರೀಕ್ಷೆ ಬರೆಯಲು 2011 ನೇ ಸಾಲಿನ ಗೆಜೆಟೆಡ್ ಪೆÇ್ರಬೇಷನರ್ಸ್ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಮತ್ತೊಂದು ವಿಶೇಷ ಅವಕಾಶವನ್ನು ಕಲ್ಪಿಸಲು ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ.
ಮೈಸೂರಿನ ಪಿಕೆಟಿಬಿ ಆಸ್ಪತ್ರೆಯ ಆವರಣ ಹಾಗೂ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾ ಕೇರ್ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 69.35 ಕೋಟಿ ರೂ. ಪರಿಷ್ಕøತ ಮೊತ್ತಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.
ಜನನಿ ಶಿಶು ಸುರಕ್ಷಾ, ತಾಯಿ ಆರೋಗ್ಯ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮಗಳಿಗೆ ಅಗತ್ಯವಿರುವ ಔಷಧ ಮತ್ತು ಇತರೆ ಸಾಮಗ್ರಿಗಳನ್ನು 23.10 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿ ಪೂರೈಸಲು ಅನುಮೋದನೆ ನೀಡಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಭೂಸ್ವಾಧೀನಕ್ಕೆ ಪರಿಷ್ಕøತ ಅಂದಾಜು 105.85 ಕೋಟಿ ರೂ.ಮೊತ್ತಕ್ಕೆ ಅನುಮೋದನೆ ನೀಡಿದೆ.
ಬೆಂಗಳೂರು ಗಾಲ್ಫ್ ಕ್ಲಬ್ ಸಂಸ್ಥೆಗೆ ನೀಡಿರುವ ಜಮೀನಿನ ಗುತ್ತಿಗೆ ದರವನ್ನು ವಾರ್ಷಿಕ ವಹಿವಾಟು ಆಧಾರದ ಮೇರೆಗೆ ಪರಿಷ್ಕರಿಸಲು ಸಂಪುಟ ಅನುಮೋದಿಸಿದೆ. ಕ್ಲಬ್‍ನ ವಾರ್ಷಿಕ ವಹಿವಾಟು ಎಂಟು ಕೋಟಿ ರೂ ಇರುವ ಹಿನ್ನೆಲೆಯಲ್ಲಿ ವಾರ್ಷಿಕ ಗುತ್ತಿಗೆ ದರ 16 ಲಕ್ಷ ರೂ ವರಮಾನ ಸರ್ಕಾರಕ್ಕೆ ಲಭಿಸುವ ನಿರೀಕ್ಷೆ ಇದೆ.
ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ರಾಮದುರ್ಗ, ಮುಧೋಳ ಮತ್ತು ಬಾದಾಮಿ ತಾಲ್ಲೂಕುಗಳ ಒಟ್ಟಾರೆ 13000 ಹೆಕ್ಟೇರ್ ಪ್ರದೇಶಕ್ಕೆ 1.80 ಟಿ.ಎಂ.ಸಿ. ನೀರನ್ನು ಬಳಸಿ ನೀರಾವರಿ ಕಲ್ಪಿಸುವ ಸಾಲಾಪೂರ ಏತ ನೀರಾವರಿ ಯೋಜನೆಯ 566 ಕೋಟಿ ರೂ ಮೊತ್ತದ ಸವಿವರ ಯೋಜನಾ ವರದಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
2017-18 ನೇ ಸಾಲಿಗೆ ಆಂತರಿಕ ಮತ್ತು ಹೊರ ಆಯವ್ಯಯ ಸಂಪನ್ಮೂಲಗಳಡಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 735 ಕೋಟಿ ರೂ. ಅವಧಿ ಸಾಲ ಪಡೆಯಲು ರಾಜ್ಯ ಸರ್ಕಾರ ಖಾತರಿ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.