ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು, ಮಾ.4-ರಾಜ್ಯ ವಿಧಾನ ಪರಿಷತ್‍ನ ಸಭಾಪತಿಗಳೂ ಆಗಿದ್ದ ವೀರಣ್ಣ ಮತ್ತೀಕಟ್ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸುಗಳನ್ವಯ ಕರ್ನಾಟಕ ರಾಜ್ಯ ಹೆಣ್ಣು ಮಕ್ಕಳ ನೀತಿ-2018 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಹೆಣ್ಣು ಮಕ್ಕಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಆರೈಕೆ ಹಾಗೂ ಹದಿನೆಂಟು ವರ್ಷ ವಯೋಮಾನದವರೆಗೆ ಅವರ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಈ ನೀತಿ ಬೆಳಕು ಚೆಲ್ಲಲಿದೆ.
ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ 19.27 ಕೋಟಿ ರೂ. ವೆಚ್ಚದಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‍ಗಳನ್ನು ಖರೀದಿಸಲು ಅನುಮತಿ ನೀಡಿದೆ. ಇದೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯರ್ಕರು ಹಾಗೂ ಸಹಾಯಕರಿಗೆ 809.49 ಲಕ್ಷ ರೂ. ವೆಚ್ಚದಲ್ಲಿ ಸಮವಸ್ತ್ರಗಳನ್ನು ಖರೀದಿಸಲು ಅನುಮೋದನೆ ನೀಡಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿ ಕೈಗೊಳ್ಳಲಾಗಿರುವ ಆಡಳಿತ ಕಚೇರಿಗಳು, ವಸತಿ ಗೃಹಗಳು, ಶುಶ್ರೂಷಕರ ಹಾಗೂ ಬೋಧಕರ ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳ 178.29 ಕೋಟಿ ರೂ ಪರಿಷ್ಕøತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ 22.20 ಕೋಟಿ ರೂ ವೆಚ್ಚದಲ್ಲಿ ಸಿಮುಲೇಷನ್ ಸೆಂಟರ್ ಮತ್ತು ಸ್ಕಿಲ್ ಲ್ಯಾಬ್ ಸ್ಥಾಪಿಸಲು ಅನುಮೋದನೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಅವಶ್ಯವಿರುವ ಔಷಧಿಗಳಿಗೆ ಸಂಗ್ರಹಣೆಗೆ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಆಯುಷ್ ಇಲಾಖೆಗೆ ಮಂಜೂರಾದ ಐದು ಎಕರೆ ಜಮೀನಿನ ಪೈಕಿ ಕರ್ನಾಟಕ ಹೋಮಿಯೋಪತಿ ಮಂಡಳಿಗೆ 20 ಗುಂಟೆ ಜಮೀನನ್ನು ಕರ್ನಾಟಕ ಹೋಮಿಯೋಪತಿ ಭವನ ನಿರ್ಮಾಣಕ್ಕೆ ಸಂಪುಟ ಮಂಜೂರು ಮಾಡಿದೆ.
ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂಲಕ 799.90 ಕೋಟಿ ರೂ ಪರಿಷ್ಕøತ ಅಂದಾಜು ವೆಚ್ಚದ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಮೂಲ ಸೌಕರ್ಯ ವಲಯದಲ್ಲಿ ಸಾರ್ವಜನಿಕ-ಖಾಸಗೀ ಸಹಭಾಗಿತ್ವದಲ್ಲಿ 2018 ರ ನೀತಿಯನ್ನು ರಚಿಸಲು ಅನುಮೋದನೆ ನೀಡಿದೆ. ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಜಲ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಸೂಕ್ಷ್ಮ ನೀರಾವರಿ ನೀತಿ-2017 ಕ್ಕೆ ಸಂಪುಟ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗವು ಸೇವಾನಿರತ ನೌಕರರೂ ಹಾಗೂ ಪಿಂಚಣಿದಾರರಿಗೆ ಅನ್ವಯವಾಗುವಂತೆ ಸಲ್ಲಿಸಿರುವ ಮೊದಲನೇ ವರದಿಯಲ್ಲಿ ವೇತನ ವಿಭಾಗದ ಶಿಫಾರಸ್ಸುಗಳನ್ನು ಸಚಿವ ಸಂಪುಟ ಅಂಗೀಕರಿಸಿದೆ.
ದತ್ತಪೀಠ ಮತ್ತು ದರ್ಗಾದಲ್ಲಿನ ಆಚರಣೆಗಳು ಹಾಗೂ ಕಾನೂನು ದಾಸ್ತಾವೇಜುಗಳನ್ನು ಆಧರಿಸಿ ಬಾಬಾಬುಡನ್‍ಗಿರಿಯಲ್ಲಿರುವ ಶ್ರೀ ಗುರುದತ್ತ ಪೀಠ ಹಾಗೂ ಬಾಬಾ ದರ್ಗಾ ವಕ್ಫ್‍ನ ಸೊತ್ತಲ್ಲ. ಬದಲಾಗಿ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಡುತ್ತದೆ ಎಂಬ ನ್ಯಾ. ನಾಗಮೋಗನ್ ದಾಸ್ ಅವರ ನೇತೃತ್ವದ ತ್ರಿ-ಸದಸ್ಯ ಉನ್ನತಾಧಿಕಾರ ಸಮಿತಿ ಸಲ್ಲಿಸಿರುವ ವರದಿಯನ್ನು ಟಿ ಬಿ ಜಯಚಂದ್ರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಪರಾಮರ್ಶಿಸಿ ಸಲ್ಲಿಸಿರುವ ಅಂಶಗಳನ್ನು ಭಾರತ ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಜಯಚಂದ್ರ ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ