ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ: ಬಿ.ಎಸ್.ಯಡಿಯೂರಪ್ಪ ಭರವಸೆ
ಬೆಂಗಳೂರು, ಮಾ.4- ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೇಕಾರರ ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕವಾಗಿ 100 ಕೋಟಿ ರೂ. ಅನುದಾನ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಅರಮನೆ ಮೈದಾನದಲ್ಲಿಂದು ಕರ್ನಾಟಕ ರಾಜ್ಯ ನೇಕಾರ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ನೇಕಾರ ಸಮುದಾಯ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ ಹಾಗೂ ನೇಕಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹಾಗೂ ನೇಕಾರರ ಸಮಾಜ ಎರಡು ಕಣ್ಣುಗಳಿದ್ದಂತೆ. ರೈತರು ನಮಗೆ ಅನ್ನ ನೀಡುವಂತೆ ನೇಕಾರರು ಮನುಷ್ಯನ ಮೂಲಭೂತ ಅವಶ್ಯಕವಾದ ಬಟ್ಟೆಯನ್ನು ನೀಡುತ್ತಾರೆ. ಸಮಾಜದಲ್ಲಿ ಇವರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರೂ ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಾರೆ.
ದೇಶದಲ್ಲಿ ಜವಳಿ ಉದ್ಯಮ ಬೃಹತ್ತಾಗಿ ಬೆಳೆದಿದೆ. ಆದರೆ ನೇಕಾರರು ನಿರ್ಲಕ್ಷ್ಯವಾಗಿಯೇ ಉಳಿದಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನೇಕಾರರ ಸಂತತಿ ವಿನಾಶದ ತುತ್ತ ತುದಿಯಲ್ಲಿದೆ. ಅಂದು ಮನೆಗೊಂದು ಕೈ ಮಗ್ಗ ಬಳಸುತ್ತಿದ್ದರು. ಇಂದು ಕಾಲ ಬದಲಾಗಿ ಪೆÇ್ರೀ ಸಿಗದ ಕಾರಣ ಕೈ ಮಗ್ಗ ಉದ್ಯಮ ಅಧೋಗತಿಗೆ ಹೋಗಿದೆ. ವಿದ್ಯುತ್ ಚಾಲಿತ ಮಗ್ಗಗಳು ಬಂದಿರುವುದರಿಂದ ಕೈ ಮಗ್ಗ ಉದ್ಯಮ ವಿನಾಶದ ಅಂಚಿಗೆ ಹೋಗಿದೆ ಎಂದು ಹೇಳಿದರು.
ನನ್ನ ಅಧಿಕಾರಾವಧಿಯಲ್ಲಿ ನೇಕಾರರ ಅಭಿವೃದ್ಧಿಗೆ 125 ಕೋಟಿ ಮೀಸಲಿಟ್ಟಿದ್ದೆ. ಈಗ ಆ ಅನುದಾನ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೇಕಾರರು ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ನೇಕಾರರ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಬಿಎಸ್ವೈ ಬೆಂಗಳೂರಿನಲ್ಲಿ ನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ ಐದು ಕೋಟಿ ಕೊಡುವುದಾಗಿ ಭರವಸೆ ನೀಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೂ ಬಾರದೆ ಇದ್ದರೂ ಈ ಹಣ ನೀಡುತ್ತೇನೆ ಎಂದು ವಾಗ್ದಾನ ಮಾಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಸಂಸದ ಪಿ.ಸಿ.ಮೋಹನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ವಕ್ತಾರ ಸುರೇಶ್ಕುಮಾರ್, ಶಾಸಕ ವಿಶ್ವನಾಥ್, ಗಾಯತ್ರಿ ಪೀಠ ಮಹಾ ಸಂಸ್ಥಾನದ ಶ್ರೀ ದಯಾನಂದ ಸ್ವಾಮೀಜಿ ಸೇರಿದಂತೆ 6 ಮಂದಿ ಸ್ವಾಮೀಜಿಗಳಿಗೆ ಗೌರವ ವಂದನೆ ಸಲ್ಲಿಸಿದರು.