ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ

Varta Mitra News

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ
ಬೆಂಗಳೂರು, ಮಾ.4-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದೆ.
ವಿಧಾನಸಭೆ ಕಾರ್ಯದರ್ಶಿ ರಾಜ್ಯಸಭೆ ಚುನಾವಣಾಧಿಕಾರಿಯಾಗಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದರೂ ಯಾವುದೇ ರಾಜಕೀಯ ಪಕ್ಷ ಇನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ರಾಜ್ಯ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ಗಮನಹರಿಸಿಲ್ಲ.
ನಾಮಪತ್ರ ಸಲ್ಲಿಸುವ ಕಡೆಯ ದಿನದವರೆಗೂ ರಾಜಕೀಯ ಪಕ್ಷಗಳು ಕಾಯುವ ಸಂಭವವೇ ಹೆಚ್ಚಾಗಿದೆ. ಕೊನೆ ಗಳಿಗೆಯಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಾ.12ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಈ ವಾರದಲ್ಲಿ ರಾಜ್ಯಸಭಾ ಸ್ಪರ್ಧಾ ಆಕಾಂಕ್ಷಿಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳ ವರಿಷ್ಠರ ಮೇಲೆ ಒತ್ತಡ, ಶಿಫಾರಸು ತರುವ ಪ್ರಯತ್ನವನ್ನು ಮಾಡಲಿದ್ದಾರೆ.
ಈ ನಡುವೆ ಚುನಾವಣಾ ಪೂರ್ವ ಮೈತ್ರಿ ರಾಜಕೀಯ ಪಕ್ಷಗಳ ನಡುವೆ ಅಚ್ಚರಿ ಪಡಬೇಕಿಲ್ಲ.
ರಾಜ್ಯಸಭಾ ಸದಸ್ಯರಾದ ಎಂ.ರೆಹಮಾನ್ ಖಾನ್, ಬಸವರಾಜ್ ಪಾಟೀಲ್, ರಂಗಸಾಯಿ ರಾಮಕೃಷ್ಣ ಹಾಗೂ ರಾಜೀವ್ ಚಂದ್ರಶೇಖರ್ ಏ.2ರಂದು ನಿವೃತ್ತಿ ಹೊಂದುತ್ತಿದ್ದಾರೆ.
ನಿವೃತ್ತಿಯಿಂದ ತೆರವಾಗುವ ಈ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಮಾ.23ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ.
ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಶಾಸಕರ ಸಂಖ್ಯೆ ಬಲದ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಆಯ್ಕೆಯಾಗಬಹುದು. ಮೂರನೇ ಅಭ್ಯರ್ಥಿ ಆಯ್ಕೆಗೆ ಇತರೆ ಪಕ್ಷಗಳ ಶಾಸಕರ ನೆರವನ್ನು ಪಡೆಯಬೇಕಾಗುತ್ತದೆ.
ಬಿಜೆಪಿ ಕೂಡ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಅಡ್ಡಿಯಾಗುವುದಿಲ್ಲ. ಆದರೆ ಜೆಡಿಎಸ್‍ಗೆ ಮಾತ್ರ ಒಂದೂ ಸ್ಥಾನ ಪಡೆಯಲು ಅನ್ಯ ಪಕ್ಷಗಳ ನೆರವು ಪಡೆಯುವುದು ಅನಿವಾರ್ಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ