ಮಾಧ್ಯಮಗಳು ರೈತರ ಕಷ್ಟಗಳು ಹಾಗೂ ವಾಸ್ತವ ಸ್ಥಿತಿಗತಿಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡುತ್ತಿಲ್ಲ: ಕೇಂದ್ರ ಮಾಜಿ ಸಚಿವ ಎಂ.ವಿ.ರಾಜಶೇಖರನ್
ಬೆಂಗಳೂರು, ಮಾ.4-ಅಮೆರಿಕಾ, ಜಪಾನ್ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕೃಷಿಗೆ ಶೇಕಡ ನೂರಕ್ಕೆ ನೂರರಷ್ಟು ಸಬ್ಸಿಡಿ ನೀಡುವುದರಿಂದ ಅಲ್ಲಿ ರೈತರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಹೇಳಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕಾಮಧೇನು ಹಂಸ ಸೇವಾ ಟ್ರಸ್ಟ್ನ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಬಳಸುವ ಸಿಮೆಂಟ್ ನೀರಿನ ತೊಟ್ಟಿಗಳನ್ನು ನಿರ್ಮಿಸುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ರಾಷ್ಟ್ರಗಳು ಕೃಷಿಯ ಮಹತ್ವವನ್ನು ಅರ್ಥ ಮಾಡಿಕೊಂಡು ರೈತರಿಗೆ ಉತ್ಪಾದನಾ ವೆಚ್ಚಕ್ಕೆ ಸರಿಸಮಾನವಾಗಿ ಸಬ್ಸಿಡಿ ನೀಡುತ್ತವೆ. ಹೀಗಾಗಿ ರೈತರ ಆದಾಯ ಸುಧಾರಿಸಿದ್ದು, ಆಹಾರಭದ್ರತೆ ಉತ್ತಮವಾಗಿದೆ. ಆದರೆ ನಮ್ಮ ದೇಶದಲ್ಲಿ ರೈತರಿಗೆ ಸರಿಯಾದ ಪೆÇ್ರೀತ್ಸಾಹ ಸಿಗುತ್ತಿಲ್ಲ ಮಾಧ್ಯಮಗಳು ರೈತರ ಕಷ್ಟಗಳು ಹಾಗೂ ವಾಸ್ತವ ಸ್ಥಿತಿಗತಿಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಧೇನು ಹಂಸ ಸೇವಾ ಟ್ರಸ್ಟ್ನ ಅಧ್ಯಕ್ಷ ಜಿ.ಜಯರಾಮ್ ಮಾತನಾಡಿ, ಬೇಸಿಗೆ ಕಾಲದಲ್ಲಿ ದನ, ಕುರಿ, ಮೇಕೆ, ಹಸು ಇತರೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಸೇರಿದಂತೆ 13 ಜಿಲ್ಲೆಗಳಲ್ಲಿ 25 ಸಿಮೆಂಟ್ ತೊಟ್ಟಿಗಳನ್ನು ಉಚಿತವಾಗಿ ನಿರ್ಮಿಸಲಾಗಿದೆ. ಸ್ವಂತ ಹಣದಲ್ಲಿ ಈ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದ್ದು, 3 ಅಡಿ ಅಗಲ, 7 ಅಡಿ ಉದ್ದವಿರುವ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ. ಈವರೆಗೂ 4 ಲಕ್ಷ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಪಶುಚಿಕಿತ್ಸೆ ಆಸ್ಪತ್ರೆ ಆರಂಭಿಸಿ ಗಾಯಗೊಂಡ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವುದು, ಮೇವು ಬೆಳೆಸುವುದು, ಗೋಶಾಲೆ ನಡೆಸುವ ಯೋಜನೆ ಟ್ರಸ್ಟ್ ಹೊಂದಿದ್ದು, ಇದಕ್ಕಾಗಿ ಮಲ್ಲಸಂದ್ರ ಗ್ರಾಮದ ಸರ್ವೆ ನಂ.35ರಲ್ಲಿರುವ 60 ಎಕರೆ 30 ಗುಂಟೆ ಗೋಮಾಳ ಜಮೀನಿನ ಪೈಕಿ 15 ಎಕರೆಯನ್ನು ಟ್ರಸ್ಟ್ಗೆ ನೀಡುವಂತೆ ತಹಸೀಲ್ದಾರ್ಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ತಹಸೀಲ್ದಾರ್ ಅವರು ತಿರಸ್ಕರಿಸಿದ್ದಾರೆ. ಮಲ್ಲಸಂದ್ರದಲ್ಲಿ ಈಗಾಗಲೇ 1.5 ಎಕರೆ ಸ್ವಂತ ಜಮೀನಿನಲ್ಲಿ ಚಿಕ್ಕ ಗೋಶಾಲೆ ನಡೆಸುತ್ತಿದ್ದೇವೆ. ಸರ್ಕಾರ ಹೆಚ್ಚುವರಿ ಜಮೀನು ಮಂಜೂರು ಮಾಡಿದರೆ ಹೆಚ್ಚಿನ ಸೇವಾ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಜನಸಂದಣಿ ಇಲ್ಲದ ಜಾಗದಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವುದರಿಂದ ಕಾಡು ಪ್ರಾಣಿಗಳು, ಸಾಕುಪ್ರಾಣಿಗಳಿಗೆ ನೀರಿನ ಬವಣೆ ನೀಗಲಿದೆ ಎಂದು ಹೇಳಿದರು.
ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾದೀಪ, ಕ್ಷೀರಗೋವು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟ್ರಸ್ಟ್ನ ಪ್ರಧಾನಕಾರ್ಯದರ್ಶಿ ಕೆ.ವಿ.ರೆಡ್ಡಿ ಮಾತನಾಡಿದರು.