ಕೈಗಾರಿಕೆಗಳಿಗೆ ಅಭಿವೃದ್ಧಿ ಸಂಸ್ಥೆಗಳು ಕಿರುಕುಳ ನೀಡುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ

ಕೈಗಾರಿಕೆಗಳಿಗೆ ಅಭಿವೃದ್ಧಿ ಸಂಸ್ಥೆಗಳು ಕಿರುಕುಳ ನೀಡುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ
ಬೆಂಗಳೂರು, ಮಾ.4-ರಾಜ್ಯದಲ್ಲಿ ಬಂಡವಾಳ ಹೂಡಿ ಕೈಗಾರಿಕೋದ್ಯಮ ಮಾಡಲು ಬಂದವರಿಗೆ ಯಾವುದೇ ರೀತಿಯ ತೊಂದರೆ ನೀಡುವುದು ಮಹಾಪಾಪ ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸುವರ್ಣ ಮಹೋತ್ಸವ ಹಾಗೂ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಡವಾಳ ಹಾಕಿ ಕೈಗಾರಿಕೋದ್ಯಮಕ್ಕಾಗಿ ಬಂದವರು ಅದಕ್ಕಾಗಿ ಬಹಳ ಶ್ರಮ ತೆಗೆದುಕೊಂಡಿರುತ್ತಾರೆ. ಇಂತಹ ಕೈಗಾರಿಕೆಗಳಿಗೆ ಅಭಿವೃದ್ಧಿ ಸಂಸ್ಥೆಗಳು ಕಿರುಕುಳ ನೀಡುವುದು ಸರಿಯಲ್ಲ ಎಂದು ತಿಳಿ ಹೇಳಿದರು.
ನಮ್ಮ ರಾಜ್ಯದಲ್ಲಿ ಕೈಗಾರಿಕಾ ನೀತಿಯನ್ವಯ 5 ವರ್ಷದಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದೆವು. ಈಗಾಗಲೇ ಹದಿಮೂರೂವರೆ ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ. ಕೈಗಾರಿಕಾ ನೀತಿ 2019ರವರೆಗೂ ಅಸ್ತಿತ್ವದಲ್ಲಿರುತ್ತದೆ. ನಾವು ಗುರಿ ಮೀರಿ ಸಾಧನೆ ಮಾಡುತ್ತೇವೆ ಎಂದರು.
ಕೈಗಾರಿಕೋದ್ಯಮಿಗಳು ಭಿಕ್ಷುಕರಲ್ಲ ಎಂಬುದನ್ನು ಕೆಐಎಡಿಬಿ ಅರ್ಥ ಮಾಡಿಕೊಳ್ಳಬೇಕು. ವಿದ್ಯುತ್, ಭೂಮಿಯನ್ನು ಉಚಿತವಾಗಿ ನೀಡುತ್ತಿಲ್ಲ. ಎಲ್ಲದಕ್ಕೂ ಕೈಗಾರಿಕೋದ್ಯಮಿಗಳು ಹಣ ನೀಡುತ್ತಾರೆ. ಅವರ ಮೇಲೆ ದರ್ಪ ತೋರಿ ಏಕಸ್ವಾಮ್ಯತೆ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದರು.
ಕೆಐಎಡಿಬಿ ಎಂದರೆ ಸೇವೆ ಮಾಡಲಿಕ್ಕೆ ಇರುವ ಸಂಸ್ಥೆ. ಕಿರುಕುಳ ನೀಡಬಾರದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಎಲ್ಲಾ ಹಂತದಲ್ಲೂ ಅಡೆತಡೆ -ಕಿರುಕುಳ ನೀಡಿದರೆ ಕೈಗಾರಿಕೆಗಳು ಬೆಳೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೈಗಾರಿಕೆಗಳು ಅಭಿವೃದ್ಧಿಯಾದರೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು, ಅದೇ ರೀತಿ ಉದ್ಯೋಗವೂ ಸೃಷ್ಟಿಯಾಗಬೇಕು. ಆಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಯಾವುದೇ ವ್ಯಕ್ತಿ ಕೈಗಾರಿಕೆ ಸ್ಥಾಪಿಸಲು ಸಾಲ-ಸೋಲ ಮಾಡಿರುತ್ತಾನೆ. ಜನರಿಗೆ ಉದ್ಯೋಗ ಕೊಡಲು ಮುಂದಾಗುತ್ತಾನೆ. ಅಂತಹವರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕು. ಅದು ಬಿಟ್ಟು ನನ್ನ ಕಚೇರಿ ಹತ್ತಿರ ಬರಲಿ, ಮನೆ ಹತ್ತಿರ ಬರಲಿ ಎಂಬ ಮನೋಭಾವನೆಯಿಂದ ತೊಂದರೆ ಕೊಡಬಾರದು. ಅದು ನಿಜಕ್ಕೂ ಮಹಾಪಾಪ. ನಾವು ಕೈಗಾರಿಕೆಗಳಿಗೆ ಎಷ್ಟು ಪೆÇ್ರೀ ಕೊಡುತ್ತೇವೆಯೋ ಅಷ್ಟು ರಾಜ್ಯಕ್ಕೆ ಒಳ್ಳೆಯದು. ಎಷ್ಟು ತೊಂದರೆ, ಅಸಹಕಾರ ಕೊಟ್ಟರೆ ಅಷ್ಟೇ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ಇನ್ಫೋಸಿಸ್, ದೀರೂಬಾಯಿ ಅಂಬಾನಿ ಕೂಡ ಒಂದು ಕಾಲದಲ್ಲಿ ಹೊಸದಾಗಿ ಉದ್ಯಮ ಪ್ರಾರಂಭಿಸಿದ್ದರು. ಕಾಲಾನಂತರ ಬೃಹತ್ತಾಗಿ ಬೆಳೆದರು. ನವೋದ್ಯಮಗಳನ್ನು ತಾತ್ಸಾರದಿಂದ ನೋಡಬಾರದು. ಒಂದು ಕಾಲದಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ರಾಜ್ಯ ಹಣಕಾಸು ಸಂಸ್ಥೆ ಸಣ್ಣ ಪ್ರಮಾಣದ ಸಾಲ ನೀಡಲು ಹಿಂದೇಟು ಹಾಕಿತ್ತು. ಈಗ ಬೃಹತ್ ಉದ್ಯಮಿಯಾಗಿದ್ದಾರೆ. ಅದಕ್ಕೆ ಯಾರನ್ನೂ ಕೂಡ ನಿರ್ಲಕ್ಷಿಸಿ ಕಿರುಕುಳ ನೀಡಬಾರದು. ಪಾರದರ್ಶಕ ಹಾಗೂ ನ್ಯಾಯಬದ್ಧವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನನಗೆ ಕೆಐಎಡಿಬಿ ಜೊತೆ ಬಹಳ ವರ್ಷಗಳಿಂದ ಒಡನಾಟವಿದೆ. ಏಳು ಮಂದಿ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ನಾನು ಬಹುತೇಕ ಕೈಗಾರಿಕಾ ಸಚಿವನಾಗಿಯೇ ಕೆಲಸ ಮಾಡಿರುವುದರಿಂದ ಹೆಚ್ಚು ಅನುಭವವಿದೆ.
ಬಂಡವಾಳ ಆಕರ್ಷಣೆ ಮಾಡುವುದು ದೊಡ್ಡ ಸವಾಲು:
ಬಂಡವಾಳ ಹೂಡಿಕೆಯಾಗದಿದ್ದರೆ ಉದ್ಯೋಗ ಸಿಗುವುದಿಲ್ಲ. ಈಗಾಗಲೇ 100ಕ್ಕೆ 60 ಮಂದಿ ಎಂಜಿನಿಯರ್, 50 ಎಂಬಿಎ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಜಾಗತಿಕವಾಗಿ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹಾಗೂ ಗುಣಮಟ್ಟ ಹೆಚ್ಚಾದಾಗ ಕೈಗಾರಿಕೆ ಬೆಳೆಯಲು ಸಾಧ್ಯ. ಕೃಷಿಯಾಧಾರಿತ ಕೈಗಾರಿಕೆಗಳು ಹೆಚ್ಚಾಗಿ ಬರಬೇಕು ಎಂದು ಹೇಳಿದರು.
ಯಾವುದೇ ಕಡತಗಳನ್ನು ನೆನೆಗುದಿಗೆ ಇಡಬೇಡಿ. ಸಕಾಲ ಯೋಜನೆ ಕೆಐಎಡಿಬಿಗೂ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿರುವುದು ನ್ಯಾಯಯುತವಾಗಿದ್ದರೆ ಅಂಥವರಿಗೆ ಭೂಮಿ ನೀಡಿ ಎಂದು ಸಲಹೆ ನೀಡಿದರು.
ಸಕಾಲಕ್ಕಿಂತ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಭೂಸ್ವಾಧೀನ ಮಾಡುವುದು ಕಷ್ಟ, ಅನಗತ್ಯವಾಗಿ ಯಾವುದೇ ಭೂಮಿ ಸ್ವಾಧೀನ ಮಾಡಬಾರದು, ಕೈಗಾರಿಕೆಗೆ ಎಷ್ಟು ಬೇಕೋ ಅಷ್ಟು ಜಮೀನನ್ನು ಮಾತ್ರ ಸ್ವಾಧೀನ ಮಾಡಿ. ಯಾವುದೇ ಕಾರಣಕ್ಕೂ ರೈತರಿಗೂ ತೊಂದರೆ ಕೊಡಬಾರದು ಎಂದು ಹೇಳಿದರು.
ರಾಜ್ಯದಲ್ಲಿ 1.5ಲಕ್ಷ ಬಂಡವಾಳ ಹೂಡಿಕೆಯಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ನಾವು ಈವರೆಗೆ 3.46 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. 1093 ಯೋಜನೆ ಜಾರಿಗೆ ಬಂದಿದೆ. 2025ರಲ್ಲಿ ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಲಿದೆ. ಅದಕ್ಕೆ ತಕ್ಕಂತೆ ಉದ್ಯೋಗವೂ ಸೃಷ್ಟಿಯಾಗಬೇಕಿದೆ ಎಂದು ಹೇಳಿದ ಆರ್.ವಿ.ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗಾರಿಕಾ ಸ್ನೇಹಿಯಾಗಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ