ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ…?: ಎಂ.ಶಿವರಾಜ್ ಪ್ರೆಶ್ನೆ

ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ…?: ಎಂ.ಶಿವರಾಜ್ ಪ್ರೆಶ್ನೆ
ಬೆಂಗಳೂರು, ಮಾ.3-ಯಾವ ಪುರುಷಾರ್ಥಕ್ಕೆ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದೀರಾ… ಬೆಂಗಳೂರಿನ ಪಾರಂಪರಿಕ ಕಟ್ಟಡಗಳನ್ನು ಅಡವಿಟ್ಟ ನೀವು ಬೆಂಗಳೂರಿನ ಕೆರೆಗಳನ್ನು ಕೂಡ ಅಡವಿಟ್ಟು ಸಾಲ ಪಡೆದಿದ್ದೀರಾ…. ನೀವು ಮಾಡಿದ ಕರ್ಮಕಾಂಡವನ್ನು ನಾವು ತೊಳೆಯುತ್ತಿದ್ದೇವೆ ಎಂದು ಬಿಜೆಪಿ ವಿರುದ್ಧ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಹರಿಹಾಯ್ದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಇಂದೂ ಕೂಡ ಮುಂದುವರೆದು ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ನಡೆಸಿದ ಆಡಳಿತ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಪಾರಂಪರಿಕ ಕಟ್ಟಡಗಳನ್ನು ಅಡಮಾನವಿಟ್ಟು ಬಿಜೆಪಿ ಸಾಲ ತೆಗೆದುಕೊಂಡಿದ್ದಲ್ಲದೆ, 17 ಕೆರೆಗಳನ್ನು ಕೆಯುಐಡಿಎಫ್‍ಸಿಗೆ ಅಡಮಾನವಿಟ್ಟು ಸುಮಾರು 22 ಕೋಟಿ ರೂ.ಗಳ ಸಾಲ ಪಡೆದಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದರು.
ಹೇರೋಹಳ್ಳಿ ಕೆರೆ, ಅಳ್ಳಾಳ, ಯಲಹಂಕ, ಕಲ್ಕೆರೆ, ಅಟ್ಟೂರು, ಚಿನ್ನಪ್ಪನಹಳ್ಳಿ, ಕೈಕೊಂಡನಹಳ್ಳಿ, ಅಂಬಲಿಪುರ, ಉತ್ತರಹಳ್ಳಿ, ಪುಟ್ಟೇನಹಳ್ಳಿ, ದಾಸರಹಳ್ಳಿ, ನಾಯಂಡಹಳ್ಳಿ, ದೀಪಾಂಜಲಿನಗರ, ಕೊಡುಗೆಹಳ್ಳಿ ಸೇರಿದಂತೆ ಒಟ್ಟು 17 ಕೆರೆಗಳನ್ನು 2006-2010ರಿಂದ 2012ರವರೆಗೆ ಕೆಯುಐಡಿಎಫ್‍ಸಿಗೆ ಅಡವಿಟ್ಟು 22ಕೋಟಿ ಸಾಲ ಪಡೆದವರು ನೀವು. ಪಾರಂಪರಿಕ ಕಟ್ಟಡಗಳನ್ನು ಅಡವಿಟ್ಟಿದ್ದಲ್ಲದೆ ಕೆರೆಗಳನ್ನು ಕೂಡ ಬಿಡದೆ ಅಡವಿಟ್ಟಿದ್ದೀರಾ. ನಿಮ್ಮ ಅಧಿಕಾರ ಮುಂದುವರೆದಿದ್ದರೆ ಬಿಬಿಎಂಪಿಯನ್ನು ಸಂಪೂರ್ಣವಾಗಿ ಅಡಮಾನವಿಡುತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದ ಮೇಲೆ ಈ 17 ಕೆರೆಗಳನ್ನು ಋಣಮುಕ್ತ ಮಾಡಿದ್ದೇವೆ ಎಂದು ಶಿವರಾಜ್ ಹೇಳಿದರು.
ಇದಲ್ಲದೆ 2011ರಲ್ಲಿ ಅಭಿವೃದ್ಧಿ ಹೆಸರಿನಲ್ಲಿ 97 ಕೋಟಿ ರೂ.ಮಾಡಿದ ಸಾಲದ ಹೊರೆ ಕೂಡ ಹಾಗೇ ಉಳಿದಿತ್ತು. ಅದನ್ನು 2016ರಲ್ಲಿ ತೀರಿಸಿದ್ದೇವೆ. ಸುಮಾರು 50 ಕೋಟಿ ಸಾಲವನ್ನು ತೀರಿಸಲಾಗಿದೆ ಎಂದು ಬಿಜೆಪಿಯವರ ಆಡಳಿತ ಕರ್ಮಕಾಂಡವನ್ನು ಎಳೆ ಎಳೆಯಾಗಿ ಸಭೆಯಲ್ಲಿ ಬಿಡಿಸಿಟ್ಟರು.
ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಬಜೆಟ್ ಮೇಲೆ ಸುದೀರ್ಘ ಚರ್ಚೆ ಮಾಡಿದ ಸಂದರ್ಭದಲ್ಲಿ ತಮ್ಮ ಪಕ್ಷದ ಆಡಳಿತವನ್ನು ಸಮರ್ಥಿಸಿಕೊಂಡ ಅವರು, ಪ್ರತಿಪಕ್ಷ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬಿಜೆಪಿಯವರು ಈಗ ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ನಾವು ಸ್ವಯಂಸೇವಾ ಸಂಸ್ಥೆಗಳು, ಸಿವಿಲ್ ಇಂಜನಿಯರ್‍ಗಳು, ಸರ್ಕಾರೇತರ ಸಂಸ್ಥೆಗಳು ಸೇರಿ ಕ್ಲೀನ್ ಬೆಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸ್ವಚ್ಛತೆ ವಾಲ್‍ಪೆÇೀಸ್ಟ್‍ಗಳನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಬಿಜೆಪಿಯವರು ಗಿಮಿಕ್ ಪಾದಯಾತ್ರೆ ಕೈಬಿಟ್ಟು ಕ್ಲೀನ್ ಬೆಂಗಳೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಹೇಳಿದರು.
ಆಡಳಿತದ ಸಂದರ್ಭಲ್ಲಿ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಅದ್ವಾನಗಳನ್ನು ಮಾಡಿದ ಬಿಜೆಪಿಯವರು ಈಗ ಬೆಂಗಳೂರು ರಕ್ಷಿಸಿ ಎಂಬ ಯಾತ್ರೆ ನಡೆಸುತ್ತಿದ್ದಾರೆ. ಜನ ಇದಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಹೇಳಿದ ಅವರು, ಬಜೆಟ್‍ನಲ್ಲಿ ಪ್ರಸ್ತಾಪಿಸಿದ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ