ಜಾತಿ-ಧರ್ಮಗಳನ್ನು ಒಡೆಯುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿವೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್

ಜಾತಿ-ಧರ್ಮಗಳನ್ನು ಒಡೆಯುವ ಹುನ್ನಾರವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿವೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಆರೋಪ
ಬೆಂಗಳೂರು, ಮಾ.3- ಇಂದು ಲಿಂಗಾಯಿತರು, ನಾಳೆ ಒಕ್ಕಲಿಗರು, ಬ್ರಾಹ್ಮಣರು ಹೀಗೆ ಜಾತಿ-ಧರ್ಮಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ ಜಾತಿಗಳನ್ನು ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಲಿಂಗಾಯಿತ ಸ್ವತಂತ್ರ ಧರ್ಮ ಎಂಬುದು ಕಾಂಗ್ರೆಸ್ ಪಾಯೋಜಿತ ಶಿಫಾರಸ್ಸಾಗಿದೆ ಎಂದು ಟೀಕಿಸಿದರು.
ಈ ರೀತಿ ಜಾತಿ, ಧರ್ಮಗಳನ್ನು ಒಡೆಯುತ್ತಿರುವ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಇದೆಲ್ಲಾ ಲಿಂಗಾಯಿತ ಸಮುದಾಯದವರೆಗೂ ಗೊತ್ತಿದೆ ಎಂದರು.
ಕರ್ನಾಟಕ ಗೂಂಡಾ ರಾಜ್ಯವಾಗಿ ಬದಲಾಗಿದೆ. ರಾಹುಲ್‍ಗಾಂಧಿ ಕಾಲಿಟ್ಟ ಕಡೆಯಲೆಲ್ಲಾ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತಿದೆ. ಅವರು ಕರ್ನಾಟಕಕ್ಕೂ ಬಂದಿದ್ದಾರೆ. ಇಲ್ಲೂ ಅದೇ ಕಥೆಯಾಗಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಹಾಕಿರುವ ಚಾರ್ಜ್‍ಶೀಟ್ ಉಸ್ತುವಾರಿ ವಹಿಸಿದ್ದದ್ದು ಪ್ರಕಾಶ್ ಜಾವಡೇಕರ್. ಹಾಗಾಗಿ ನಮ್ಮ ಕೇಂದ್ರದ ನಾಯಕರು ಈ ಬಗ್ಗೆ ತರಾಟೆ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಚಾರ್ಜ್‍ಶೀಟ್ ಸಿದ್ದಗೊಂಡ ನಂತರ ಕೇಂದ್ರ ನಾಯಕರೇ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.
ಬಿಬಿಎಂಪಿ ಕಚೇರಿಗೆ ಬೆಂಕಿ ಇಟ್ಟ ನಾರಾಯಣಸ್ವಾಮಿ ಹಾಗೂ ಶಾಸಕ ಬೈರತಿ ಬಸವರಾಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ನಡೆದಿವೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇದನ್ನೆಲ್ಲಾ ಪಾದಯಾತ್ರೆ ವೇಳೆ ಕ್ಷೇತ್ರದ ಜನತೆಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.
ಕೆ.ಆರ್.ಪುರಂ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ನಂದೀಶ್ ರೆಡ್ಡಿಯವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳುವ ಮೂಲಕ ಟಿಕೆಟ್ ಘೋಷಣೆ ಮೊದಲೇ ಅಶೋಕ್ ನಂದೀಶ್‍ರೆಡ್ಡಿ ಅವರ ಟಿಕೆಟ್‍ಅನ್ನು ದೃಢಪಡಿಸಿದರು.
ಕಾಂಗ್ರೆಸ್ ಸೋಲು ಖಚಿತ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈಬಾರಿಯ ಚುನಾವಣೆಯಲ್ಲಿ ಸೋಲನುಭವಿಸಲಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೂಂಡಾ ಸಂಸ್ಕøತಿ ಮನೆ ಮಾಡಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಕೇಂದ್ರ ಸಚಿವ ಅನಂತ್‍ಕುಮಾರ್ ಮಾತನಾಡಿ, ಗಾಂಜಾ, ಗೂಂಡಾಗಳ ರಾಜ್ಯವಾಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಮಗೆ ಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ವಿನ್ನಿಂಗ್ ಹ್ಯಾಟ್ರಿಕ್ ಆದರೆ, ರಾಹುಲ್‍ಗಾಂಧಿ ಡಿಪಿಟ್ ಹ್ಯಾಟ್ರಿಕ್ ಎಂದು ವ್ಯಂಗ್ಯವಾಡಿದರು.
ಶಾಸಕ ಅರವಿಂದಲಿಂಬಾವಳಿ ಮಾತನಾಡಿ, ಕೇಂದ್ರ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಆದರೆ, ಕೇಂದ್ರದ ಹಣವನ್ನು ರಾಜ್ಯ ಸರ್ಕಾರ ತಾನೇ ಕೊಟ್ಟಿದ್ದೆಂದು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರೆಲ್ಲಾ ಒಟ್ಟುಗೂಡಿ ರೈಲ್ವೆ ಸಚಿವ ಪಿಯುಷ್‍ಗೋಯೆಲ್ ಅವರನ್ನು ಭೇಟಿ ಮಾಡಿ ಸಬ್‍ಅರ್ಬನ್ ರೈಲ್ವೆ ಆಗ್ರಹಿಸಿದ್ದೆವು. ಆಗ 17 ಸಾವಿರ ಕೋಟಿ ರೂ.ಗಳನ್ನು ಅವರು ಕೊಟ್ಟರು. ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಕೊಟ್ಟಿದ್ದು ಕೇವಲ 300ಕೋಟಿ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಹೇಳಿದರು.
ರಾಮಮೂರ್ತಿನಗರದ ಕೆಂಪೇಗೌಡ ಬಡಾವಣೆಯಿಂದ ಹೊರಮಾವು ವಾರ್ಡ್ ಬಿಬಿಎಂಪಿ ಕಚೇರಿವರೆಗೆ ಸುಮಾರು 3.5ಕಿ.ಮೀ. ಪಾದೆಯಾತ್ರೆಯನ್ನು ಬಿಜೆಪಿ ನಾಯಕರು ಕೈಗೊಂಡರು.
ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕ ನಂದೀಶ್‍ರೆಡ್ಡಿ, ಶಾಸಕ ದಾಸರಹಳ್ಳಿ ಮುನಿರಾಜು, ಪಾಲಿಕೆ ಸದಸ್ಯರಾದ ಪೂರ್ಣಿಮಾ ಬಂಡೆರಾಜು, ಪದ್ಮಾವತಿ ಶ್ರೀನಿವಾಸ್ ಮತ್ತಿತರರ ಮುಖಂಡರು, ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ