ದಲೈಲಾಮಾ ಭಾರತದ ಯಾವುದೇ ಭಾಗದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆ ನಡೆಸಲು ಸ್ವತಂತ್ರರು: ಭಾರತ ಸ್ಪಷ್ಟನೆ

ನವದೆಹಲಿ:ಮಾ-2: ಬೌದ್ಧ ಧರ್ಮಗುರು ದಲೈಲಾಮಾ ಭಾರತದ ಯಾವುದೇ ಭಾಗದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆ ನಡೆಸಲು ಸ್ವತಂತ್ರರಾಗಿದ್ದಾರೆ ಎಂದು  ಭಾರತ ತಿಳಿಸಿದೆ. ಇದೇ ವೇಳೆ ಚೀನಾ ಓಲೈಕೆಗಾಗಿ ದಲೈಲಾಮಾ ಅವರ ಕುರಿತ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

 

ದಲಾಯಿ ಲಾಮಾ ಅವರು ಭಾರತದಲ್ಲಿ ನೆಲೆಸಿ 60 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಿಂದ ದೂರವಿರುವಂತೆ ಸರಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಭಾರತ ದಲೈಲಾಮಾ ಅವರ ಪವಿತ್ರತೆಯ ಬಗ್ಗೆ ಭಾರತ ಸರ್ಕಾರ ಸ್ಪಷ್ಟ ಹಾಗೂ ಸ್ಥಿರವಾಗಿದೆ ಎಂದಿದೆ.

 

ದಲೈಲಾಮ ಪೂಜ್ಯ ಧಾರ್ಮಿಕ ನಾಯಕರಾಗಿದ್ದು, ಭಾರತದ ಜನತೆ ಅವರನ್ನು ಸಂಪೂರ್ಣವಾಗಿ ಗೌರವಿಸುತ್ತಾರೆ. ದಲೈಲಾಮಾ ಕುರಿತ ಸರ್ಕಾರದ ನಿಲುವಲ್ಲಿ ಯಾವುದೇ ಬದಲಾವಣೆಯಿಲ್ಲ. ಭಾರತದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ದಲೈಲಾಮಾ ಸಂಪೂರ್ಣ ಸ್ವತಂತ್ರರಾಗಿದ್ದಾರೆಂದು ತಿಳಿಸಿದೆ.

 

ದಲಾಯಿ ಲಾಮಾ ಅವರು ಭಾರತಕ್ಕೆ ಆಗಮಿಸಿ 60 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 1959ರ ಮಾರ್ಚ್‌ನಲ್ಲಿ ಚೀನಾ ಸರಕಾರ ಟಿಬೆಟ್‌ನ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಿದಾಗ ಲ್ಹಾಸಾದಿಂದ ಪಲಾಯನ ಮಾಡಿ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು.

 

‘ಸೈನಿಕನಂತೆ ವೇಷ ಮರೆಸಿಕೊಂಡ ದಲಾಯಿ ಲಾಮಾ ಅವರು ತಮ್ಮ ಅರಮನೆಯಿಂದ ತಪ್ಪಿಸಿಕೊಂಡು ಜನಜಂಗುಳಿಯಲ್ಲಿ ಸೇರಿ ಪಲಾಯನ ಮಾಡಿದ್ದರು. ನಂತರ ಅವರನ್ನು ಯಾವತ್ತೂ ನೋಡಿಲ್ಲ’ ಎಂದು 2015ರಲ್ಲಿ ಟೈಮ್ಸ್‌ ಮ್ಯಾಗಜಿನ್‌ ಬರೆದಿತ್ತು. ಆ ಅರಮನೆಯನ್ನು ಈಗಲೂ ಲ್ಹಾಸಾದಲ್ಲಿ ದಲಾಯಿ ಲಾಮಾ ಅರಮನೆ ಎಂದೇ ಕರೆಯಲಾಗುತ್ತಿದೆ. ಟಿಬೆಟ್‌ನಿಂದ ಪರಾರಿಯಾದ ಎರಡು ವಾರಗಳ ಬಳಿಕ ಭಾರತದಲ್ಲಿ ಕಾಣಿಸಿಕೊಂಡರು. ನಂತರ ಧರ್ಮಶಾಲಾದಲ್ಲಿ ವಾಸ್ತವ್ಯ ಹೂಡಿ ಅದನ್ನೇ ತಮ್ಮ ಅಧಿಕೃತ ರಾಜಧಾನಿಯಾಗಿ ಮಾಡಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ