ಆರ್ಥಿಕ ಕಾರಿಡಾರ್‌ ಯೋಜನೆಯಲ್ಲಿ ಕೈದಿಗಳನ್ನು ಕಾರ್ಮಿಕರಾಗಿ ಬಳಸಿಕೊಳ್ಳುತ್ತಿದೆ ಚೀನಾ  

ಇಸ್ಲಾಮಾಬಾದ್‌:ಮಾ-2: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (CPEC) ಯೋಜನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಚೀನಾ ಭಾರೀ ಸಂಖ್ಯೆಯಲ್ಲಿ ತನ್ನ ಕೈದಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ತಿಳಿಸಿದೆ.

 

ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯ ಪ್ರತಿಪಕ್ಷವಾದ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಸದಸ್ಯ ನವಾಬ್‌ ಮೊಹಮ್ಮದ್‌ ಯೂಸುಫ್‌ ತಾಲ್ಪುರ್  ಅವರು ಇತ್ತೀಚೆಗೆ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

 

ರಸ್ತೆ ನಿರ್ಮಾಣಕ್ಕೆ ಚೀನಾದ ಜೈಲುಗಳಿಂದ ಕೈದಿಗಳನ್ನು ಕರೆತರಲಾಗಿದೆ ಎಂದು ನನಗೆ ಮಾಹಿತಿ ಬಂದಿದೆ. ಅವರು ಇಲ್ಲೂ ಅಪರಾಧ ಕೃತ್ಯಗಳಲ್ಲಿ ತೊಡಗಬಹುದು. ಆದ್ದರಿಂದ ಸೂಕ್ತ ಭದ್ರತೆ ಅಗತ್ಯ ಎಂದು ಅವರು ಸಭೆಯಲ್ಲಿ ಸಲಹೆ ನೀಡಿದ್ದಾರೆ.

 

ಆತಿಥೇಯ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದು ದೇಶದ ಕೈದಿಗಳನ್ನು ಇನ್ನೊಂದು ದೇಶಕ್ಕೆ ಕರೆದೊಯ್ಯುವಂತಿಲ್ಲ ಎಂದು ಚೀನಾ-ಪಾಕ್ ನಡುವೆ ಅಲಿಖಿತ ಒಪ್ಪಂದವಿದೆ ಎಂದು ಅವರು ಹೇಳಿದ್ದಾರೆ.

 

ಇದೇವೇಳೆ ಕರಾಚಿಯಲ್ಲಿ ಎಟಿಎಂ ವಂಚನೆ ಪ್ರಕರಣಗಳಲ್ಲಿ ಹಲವಾರು ಚೀನೀ ಪ್ರಜೆಗಳನ್ನು ಬಂಧಿಸಿರುವುದನ್ನು ಕೂಡ ಅವರು ಈ ವೇಳೆ ನೆನಪಿಸಿದ್ದಾರೆ.  ಈ ನಿಟ್ಟಿನಲ್ಲಿ  ಚೀನೀ ಕೈದಿಗಳು ಪಾಕಿಸ್ತಾನದಲ್ಲಿ ನೆಲೆಸಿರುವ ಬಗ್ಗೆ ಪಾಕ್ ಗೃಹ ಸಚಿವಾಲಯ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ