ಬೆಂಗಳೂರು, ಮಾ.2-ಆರನೇ ವೇತನ ಆಯೋಗದ ವರದಿ ಜಾರಿ ನಂತರ ರಾಜ್ಯ ಸರ್ಕಾರಿ ನೌಕರರು ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ನಂ.1 ಸ್ಥಾನದಲ್ಲಿದ್ದಾರೆ ಎಂದು ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಮಂಜೇಗೌಡ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ನಾಳೆ ನಡೆಯುವ ಸರ್ಕಾರಿ ನೌಕರರ ಬೃಹತ್ ಸಮಾವೇಶದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.30ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಎಲ್ಲ ಸರ್ಕಾರಿ ನೌಕರರು ಸ್ವಾಗತಿಸಿದ್ದು, ಸಂತೃಪ್ತಿಯಿಂದಿದ್ದಾರೆ. ನಿವೃತ್ತ ನೌಕರರು ಬೇಕಾಬಿಟ್ಟಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿ ಶೇ.30ರಷ್ಟು ವೇತನ ಹೆಚ್ಚಳ ಮಾಡಿರುವುದರಿಂದ ದೇಶದಲ್ಲೇ ನಮ್ಮ ಸರ್ಕಾರಿ ನೌಕರರು ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಕೇರಳದಲ್ಲಿ ಕನಿಷ್ಠ ಮೂಲ ವೇತನ 16,350 ರೂ. ಇದೆ. ನಮ್ಮಲ್ಲಿ 17 ಸಾವಿರ ಇದೆ. ಕೇಂದ್ರ ಸರ್ಕಾರಿ ನೌಖರರು ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ಆರನೇ ವೇತನ ಆಯೋಗ ಜಾರಿ ನಂತರವೂ ಶೇ.10ರಷ್ಟು ವ್ಯತ್ಯಾಸ ಇದೆ. ನಾಳಿನ ಸಮಾವೇಶದಲ್ಲಿ ವ್ಯತ್ಯಾಸವನ್ನು ಸರಿಪಡಿಸಿ ಎಂದು ಮನವಿ ನೀಡಲಾಗುವುದು. ಆದರೆ ವಾಸ್ತವವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಐದು ವರ್ಷಕ್ಕೊಮ್ಮೆ ಆಯೋಗ ರಚನೆ ಮಾಡಿ ವೇತನ ಪರಿಷ್ಕರಣೆ ಮಾಡಲಾಗುತ್ತದೆ.. ಕೇಂದ್ರ ಸರ್ಕಾರಿ ನೌಕರರಿಗೆ 10ವರ್ಷಕ್ಕೊಮ್ಮೆ ಆಯೋಗ ರಚನೆಯಾಗುತ್ತದೆ. 2023ರಲ್ಲಿ ಏಳನೇ ವೇತನ ಆಯೋಗ ರಚನೆಯಾಗಲಿದ್ದು, ಅದರ ಜಾರಿ ನಂತರ ರಾಜ್ಯಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಕ್ಕಿಂತಲೂ ಹೆಚ್ಚಿನ ವೇತನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಾಳಿನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು. ಸುಮಾರು ಒಂದೂವರೆಯಿಂದ ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, 60 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. 50 ಸಾವಿರ ಮಂದಿ ನಿಂತುಕೊಳ್ಳಲು ಸ್ಥಳಾವಕಾಶ ಮಾಡಲಾಗಿದೆ. ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೂ ವ್ಯವಸ್ಥೆ ಮಾಡಲಾಗಿದೆ.ಮಹಿಳೆಯರಿಗಾಗಿ 30, ಪುರುಷರಿಗಾಗಿ 70 ಕೌಂಟರ್ಗಳು ಸೇರಿ ಒಟ್ಟು 100 ಕೌಂಟರ್ಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.
ಸಮಾವೇಶಕ್ಕಾಗಿ ಎರಡೂವರೆ ಕೋಟಿ ವೆಚ್ಚವಾಗಲಿದ್ದು, ಊಟದ ವ್ಯವಸ್ಥೆಯನ್ನು ದಾನಿಗಳು ಪ್ರಾಯೋಜಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರಾಮು, ಉಪಾಧ್ಯಕ್ಷರಾದ ಬಸವರಾಜ ಗುರಿಕಾರ್, ಕುಮಾರಿ ಜಿಟಿಯಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.