ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ

ವಾಷಿಂಗ್ಟನ್, ಮಾ.2-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಪತ್ತೆಗಾಗಿ ಕೇಂದ್ರೀಯ ತನಿಖಾ ದಳ-ಸಿಬಿಐ ಪ್ರಯತ್ನಗಳು ಮುಂದುವರಿದಿರುವಾಗಲೇ ಅಮೆರಿಕದಲ್ಲಿ ಕಂಡುಬಂದಿರುವ ಎರಡು ಬೆಳವಣಿಗೆಗಳು ಭಾರೀ ನಿರಾಸೆ ಮೂಡಿಸಿದೆ.
ಡೈಮಂಡ್ ಜ್ಯೂವೆಲರ್ ನೀರವ್ ಮೋದಿ ತಮ್ಮ ದೇಶದಲ್ಲಿ ಇದ್ದಾನೆ ಎಂಬ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ತನಗೆ ತಿಳಿದಿದ್ದರೂ, ಆತ ನ್ಯೂಯಾಕ್‍ನಲ್ಲಿರುವ ಬಗ್ಗೆ ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಈ ಮಧ್ಯೆ, ಮತ್ತೊಂದು ಬೆಳವಣಿಗೆಯಲ್ಲಿ ನೀರವ್ ಮೋದಿ ಒಡೆತನದ ಸಂಸ್ಥೆಯಿಂದ ಹಣ ವಸೂಲಿ ಮಾಡುವ ಸಾಲಿಗರ ಯತ್ನಕ್ಕೆ ಅಡ್ಡಿಯಾಗುವ ಕೋರ್ಟ್ ತೀರ್ಪು ಹೊರಬಿದ್ದಿದೆ.
ಈ ಎರಡೂ ಬೆಳವಣಿಗೆಗಳಿಂದಾಗಿ ನೀರವ್ ಪತ್ತೆಗೆ ಮತ್ತು ಆತನ ಸಂಸ್ಥೆಯಿಂದ ಸಾಲ ವಸೂಲಿಗೆ ಭಾರೀ ಹಿನ್ನಡೆಯಾಗಿದೆ.
ಪಿಎನ್‍ಬಿ ಹಗರಣದಲ್ಲಿ ದೂರು ದಾಖಲಾಗುವುದಕ್ಕೆ ಮುನ್ನವೇ ನೀರವ್ ತನ್ನ ಕುಟುಂಬದೊಂದಿಗೆ ನ್ಯೂಯಾರ್ಕ್‍ಗೆ ಪರಾರಿಯಾಗಿ ಅಲ್ಲಿನ ಭವ್ಯ ಅಪಾರ್ಟ್‍ಮೆಂಟ್‍ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿದ ವಿದೇಶಾಂಗ ಇಲಾಖೆ ವಕ್ತಾರರು, ನೀರವ್ ಅಮೆರಿಕದಲ್ಲಿ ನೆಲೆಸಿರುವ ವರದಿ ಬಗ್ಗೆ ನಮಗೆ ತಿಳಿಸಿದೆ. ಆದರೆ ಕಳಂಕಿತ ಭಾರತೀಯ ಉದ್ಯಮಿ ನಮ್ಮ ದೇಶದಲ್ಲೇ ಇದ್ದಾನೆ ಎಂಬ ಬಗ್ಗೆ ದೃಢಪಟ್ಟಿಲ್ಲ ಹಾಗೂ ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪರಾರಿಯಾಗಿರುವ ಉದ್ಯಮಿಯನ್ನು ಪತ್ತೆ ಮಾಡಲು ಭಾರತದ ಸರ್ಕಾರಕ್ಕೆ ನೀವು ನೆರವು ನೀಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀರವ್ ವಿರುದ್ಧ ತನಿಖೆಗೆ ಸಂಬಂಧಪಟ್ಟಂತೆ ಭಾರತೀಯ ಅಧಿಕಾರಿಗಳಿಗೆ ಕಾನೂನು ನೆರವು ನೀಡುವ ವಿಷಯವು ನ್ಯಾಯಾಂಗ ಇಲಾಖೆಗೆ ಸಂಬಂಧಪಟ್ಟಿದ್ದಾಗಿದೆ. ನಾವು ಈ ಪ್ರಕರಣವನ್ನು ಆ ಇಲಾಖೆಗೆ ವಹಿಸಬಹುದಾಗಿದೆ ಎಂದರು.
ನೀರವ್‍ಗೆ ಸದ್ಯಕ್ಕೆ ನಿರಾಳ: ಏತನ್ಮಧ್ಯೆ, ನೀರವ್ ಒಡೆತನದ ಫೈರ್‍ಸ್ಟಾರ್ ಡೈಮಂಡ್ ಇಂಕ್ ಸಂಸ್ಥೆ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆ ಸಂಸ್ಥೆಯಿಂದ ಭಾರೀ ಪ್ರಮಾಣದ ಬಾಕಿ ವಸೂಲಿಗೆ ಹಿನ್ನಡೆಯಾಗಿದೆ.
ಈ ಸಂಸ್ಥೆಯಿಂದ ಸಾಲ ವಸೂಲಿ ಮಾಡಲು ಬ್ಯಾಂಕುಗಳೂ ಸೇರಿದಂತೆ ಸಾಲಿಗರಿಗೆ ತಡೆ ನೀಡಲು ಅಮೆರಿಕದ ನ್ಯಾಯಾಲಯವೊಂದು ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಸಾಲ ವಸೂಲಾತಿಗೆ ಭಾರೀ ಹಿನ್ನಡೆಯಾಗಿದೆ.
ಭಾರತದ ವಾಣಿಜ್ಯ ರಾಜಧಾನಿ ಮುಂಬೈನ್ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) ಶಾಖೆಯೊಂದರಿಂದ 12,723 ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣದಲ್ಲಿ ಫೈರ್‍ಸ್ಟಾರ್ ಡೈಮಂಡ್ ಮತ್ತು ಅದರ ಸಹೋದರಿ ಸಂಸ್ಥೆಗಳು ಶಾಮೀಲಾಗಿವೆ. ತಾನು ಸಂಪೂರ್ಣ ದಿವಾಳಿಯಾಗಿರುವುದಾಗಿ ನ್ಯೂಯಾರ್ಕ್‍ನ ದಿವಾಳಿ ನ್ಯಾಯಾಲಯಕ್ಕೆ ಪಾಪರುಗಿರಿ (ದಿವಾಳಿ) ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ಹೊರಡಿಸಿರುವ ಕೋರ್ಟ್, ಈ ಕಂಪನಿಯಿಂದ ಸಾಲ ವಸೂಲಾತಿಗೆ ತಡೆಯಾಜ್ಞೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ