ಹೈದರಾಬಾದ್/ರಾಯ್ಪುರ್, ಮಾ.2- ಹಿಂಸಾಚಾರ, ರಕ್ತಪಾತ ಮುಂದುವರಿಸಿರುವ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಇಂದು ಮುಂಜಾನೆ ತೆಲಂಗಾಣ ಮತ್ತು ಛತ್ತೀಸ್ಗಢ ಗಡಿ ಭಾಗದಲ್ಲಿ 15 ನಕ್ಸಲೀಯರನ್ನು ಹೊಡೆದುರುಳಿಸಿದೆ. ಹತ ಬಂಡುಕೋರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣದ ಭದ್ರಾದ್ರಿ ಕೋತೆಗುಡಂ ಹಾಗೂ ಛತ್ತೀಸ್ಗಢದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಎರಡೂ ರಾಜ್ಯಗಳ ಎಎನ್ಎಫ್ ಪಡೆ ನಿನ್ನೆ ರಾತ್ರಿಯಿಂದಲೇ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವಿಶೇಷ ತಂಡದಲ್ಲಿ ಗ್ರೇ ಹೌಂಡ್ಸ್ ಯೋಧರೂ ಸಹ ಇದ್ದರು.
ಯೋಧರು ಮತ್ತು ಪೆÇಲೀಸರ ಜಂಟಿ ಪಡೆಯನ್ನು ಗಮನಿಸಿದ ನಕ್ಸಲರು ಗುಂಡು ಹಾರಿಸಿದರು. ಈ ದಾಳಿಯಲ್ಲಿ ಕೆಲವು ಯೋಧರಿಗೆ ಗಾಯಗಳಾದವು. ತಕ್ಷಣ ಎಚ್ಚೆತ್ತ ಎಎನ್ಎಫ್ ಪಡೆ ಪ್ರತಿದಾಳಿ ನಡೆಸಿದಾಗ ಸುಮಾರು 20 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಸಿತು.
ಬಂಡುಕೋರರಿಂದ ಗುಂಡಿನ ಮೊರೆತ ನಿಂತಾಗ ಸ್ಥಳವನ್ನು ಪರಿಶೀಲಿಸಿದ ಯೋಧರಿಗೆ 15 ನಕ್ಸಲರ ಶವಗಳು ಪತ್ತೆಯಾದವು. ಹತ ಮಾವೋವಾದಿಗಳಿಂದ ರೈಫಲ್ಗಳು, ಪಿಸ್ತೂಲ್ಗಳು, ಮದ್ದುಗುಂಡುಗಳು, ನಾಡಬಾಂಬುಗಳು, ಸಂವಹನ ಸಾಧನಗಳು ಹಾಗು ಮತ್ತಿತ್ತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಡುಕೋರರ ಗುಂಪಿನಲ್ಲಿದ್ದ ಇತರರು ಪರಾರಿಯಾಗಿರುವ ಸಾಧ್ಯತೆ ಇದ್ದು, ದಟ್ಟ ಕಾನನದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹತರಾದ ನಕ್ಸಲರಲ್ಲಿ ಮಾವೋವಾದಿ ಕಮ್ಯಾಂಡರ್ ಸಹ ಸೇರಿದ್ದಾನೆ. ಹಲವಾರು ಅಪರಾಧ ಕೃತ್ಯಗಳು ಮತ್ತು ಹಿಂಸಾಚಾರದಲ್ಲಿ ಶಾಮೀಲಾಗಿದ್ದು, ಕೆಲವರ ತಲೆಗೆ ಬಹುಮಾನಗಳನ್ನು ಘೋಷಿಸಲಾಗಿತ್ತು. ಇದು ಈ ವರ್ಷ ನಕ್ಸಲ್ ವಿರುದ್ಧದ ಮಹತ್ವದ ಕಾರ್ಯಾಚರಣೆ ಎಂದು ಬಿಜಾಪುರದ ಪೆÇಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ತಿಳಿಸಿದ್ದಾರೆ.
ತೆಲಂಗಾಣದ ಭದ್ರಾದ್ರಿ ಕೋತೆಗುಡಂನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ವಿಶೇಷ ಪಡೆಗಳ ಜೊತೆ ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರು ಹತರಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.