ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟ ಬಿಜೆಪಿಯವರಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು, ಮಾ.2-ಬಿಬಿಎಂಪಿ ಆಸ್ತಿಗಳನ್ನು ಅಡಮಾನವಿಟ್ಟಂತಹ ಬಿಜೆಪಿಯವರು ಈಗ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಐದು ವರ್ಷಗಳ ಕಾಲ ಬಿಬಿಎಂಪಿ ಆಡಳಿತ ನಡೆಸಿತ್ತು. ಆಗ ಬಿಬಿಎಂಪಿ ಕಡತಗಳನ್ನು ಸುಟ್ಟು ಹಾಕಿದವರು ಯಾರು, ನೈಟ್ ಟೆಂಡರ್ ಕರೆದವರು ಯಾರು ಎಂದು ಪ್ರಶ್ನಿಸಿದರು.

ಪಾಲಿಕೆ ಆಸ್ತಿಗಳನ್ನು ಅಡಮಾನವಿಟ್ಟವರು ಯಾರು ಎಂದ ಅವರು, ಬಿಬಿಎಂಪಿಗೆ ಸೇರಿದ 110 ಹಳ್ಳಿಗಳಿಗೆ ನೀರು, ರಸ್ತೆ ಕೊಟ್ಟಿದ್ದಾರೆಯೇ? ಈ ವಿಚಾರವನ್ನೆಲ್ಲ ಅವರು ಜನರಿಗೆ ಹೇಳಬೇಕಲ್ಲವೇ? ಪಾದಯಾತ್ರೆ ಮಾಡುವ ಮೂಲಕ ಜನರಿಗೆ ಸತ್ಯ ಹೇಳಬೇಕೇ ಹೊರತು, ಸುಳ್ಳು ಪ್ರಚಾರ ಮಾಡುವುದಲ್ಲ ಎಂದು ಟೀಕಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂತಹ ಪ್ರಕರಣಗಳ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ನಾಟಕ ಬೆಂಗಳೂರಿಗರಿಗೆ ಅರ್ಥವಾಗುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಸದ ಸಮಸ್ಯೆ ಏಕೆ ಪರಿಹರಿಸಲಿಲ್ಲ. ಅಶೋಕ್ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದವರು. ಈ ಎಲ್ಲಾ ಪ್ರಕರಣಗಳ ಲೆಕ್ಕ ಕೊಡುವವರು ಯಾರು? ಎಂದು ಪ್ರಶ್ನಿಸಿದರು.

ರಸ್ತೆಯಲ್ಲಿ ಲೆಕ್ಕ ಕೇಳುವುದಲ್ಲ, ಬಿಬಿಎಂಪಿ ಸಭೆಯಲ್ಲಿ ಹಾಗೂ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ