ಮೈಸೂರು, ಮಾ.2-ಬೆಂಗಳೂರಿನಲ್ಲಿ ಇತ್ತೀಚೆಗೆ ನಾಮಕರಣ ಮುಗಿಸಿದ್ದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸುಪುತ್ರ ಆದ್ಯವೀರ್ನನ್ನು ಇಂದು ಅರಮನೆಗೆ ಆದರದಿಂದ ಬರಮಾಡಿಕೊಳ್ಳಲಾಯಿತು.
ರಾಜವಂಶಸ್ಥರು ಹಾಗೂ ಅರಮನೆಯ ಸಿಬ್ಬಂದಿ ವರ್ಗದವರು ಮಗುವಿಗೆ ಆರತಿ ಬೆಳಗಿ ದೃಷ್ಟಿ ತೆಗೆದು ಬರಮಾಡಿಕೊಂಡರು.
ಯದುವೀರ್ ಹಾಗೂ ಕೃಷಿಕಾಕುಮಾರಿ ಇಂದು ಬೆಂಗಳೂರಿನಿಂದ ಮಗುವನ್ನು ಅರಮನೆಗೆ ಕರೆತಂದರು.
ಈ ವೇಳೆ ಮಾತನಾಡಿದ ಯದುವೀರ್ ಬೆಂಗಳೂರಿನಲ್ಲಿ ಔಪಚಾರಿಕವಾಗಿ ನಾಮಕರಣ ಮಾಡಲಾಯಿತು. ಆದರೆ ಇದರಲ್ಲಿ ಬೇರೆ ಅರ್ಥ ಏನೂ ಇಲ್ಲ. ಆದ್ಯವೀರ್ ಚೆನ್ನಾಗಿದ್ದಾನೆ ಎಂದು ತಿಳಿಸಿದರು.
ನಮ್ಮ ಕುಲದೇವರು ಚಾಮುಂಡೇಶ್ವರಿ, ಹಾಗಾಗಿ ಚಾಮುಂಡಿಬೆಟ್ಟಕ್ಕೆ ಕರೆದೊಯ್ದು ಪೂಜೆ ಮಾಡಿಸುವುದಾಗಿ ಯದುವೀರ್ ಸ್ಪಷ್ಟಪಡಿಸಿದರು.
ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಜರಿದ್ದರು.