ಬೆಂಗಳೂರು,ಮಾ.2-ಮಹಿಳೆಯರ ಅಭಿವೃದ್ಧಿಗಾಗಿ ಕೈಗಾರಿಕೆಯಲ್ಲಿ ಪ್ರತ್ಯೇಕ ನೀತಿ ಹಾಗೂ ಅವರಿಗಾಗಿಯೇ ಕೈಗಾರಿಕಾ ಪಾರ್ಕ್ ನಿರ್ಮಿಸುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತಥದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹೋಟೆಲ್ ಲಲಿತ್ ಅಶೋಕದಲ್ಲಿಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಾಮಥ್ರ್ಯ ಮತ್ತು ಮೌಲ್ಯ ಕುರಿತ ಎರಡು ದಿನದ ಸಮಾವೇಶ ಹಾಗೂ ಹಾರೋಹಳ್ಳಿ , ಮೈಸೂರು ಮತ್ತು ಬಳ್ಳಾರಿಯಲ್ಲಿ ಮಹಿಳಾ ಉದ್ಯಮಿ ಪಾರ್ಕ್ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಎಲ್ಲ ಪ್ರತಿಭಾನ್ವಿತ ಮಹಿಳೆಯರು ಮತ್ತು ಉದ್ಯಮಿಗಳಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು ಎಂದು ಮುಂಚಿತವಾಗಿಯೇ ಶುಭಾಷಯ ಕೋರಿದರು.
ನಮ್ಮ ಕರ್ನಾಟಕದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿದೆ. ಮಹಿಳೆಯರ ಅಭಿವೃದ್ದಿಗಾಗಿ ಕೈಗಾರಿಕೆಯಲ್ಲಿ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿ ಅವರಿಗೋಸ್ಕರ ಪ್ರತ್ಯೇಕ ಮಹಿಳಾ ಪಾರ್ಕ್‍ನ್ನು ನಿರ್ಮಿಸಿರುವುದು ರಾಜ್ಯದ ಇತಿಹಾಸದಲ್ಲೇ ವಿಶಿಷ್ಟವೆನಿಸಿದೆ ಎಂದರು.
ಮಹಿಳಾಭಿವೃದ್ದಿಯ ಕಾರ್ಯಗಳು ಇನ್ನು ಮುಂದೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕೆಂದು ಅನುಭವ ಮಂಟಪದಲ್ಲಿ ತಿಳಿಸಿದ್ದರು. ಮಹಿಳೆಯರಿಗೆ ಎಲ್ಲ ರೀತಿಯ ಸಮಾನ ಅವಕಾಶ ಕಲ್ಪಿಸಿಕೊಡಬೇಕಾಗಿರುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು , ಪ್ರತಿ ಸಾವಿರ ಪುರುಷರಿಗೆ ಕೇವಲ 947 ಮಹಿಳೆಯರು ಇದ್ದಾರೆ. ಈ ಏರಿಳಿತವನ್ನು ಸರಿದೂಗಿಸಬೇಕು. ಹೆಣ್ಣು ಮಗು ಎಂಬ ನಿರ್ಲಕ್ಷ್ಯದಿಂದ ಕೆಲವು ಸ್ವಾರ್ಥಿಗಳು ಭ್ರೂಣ ಹತ್ಯೆ ನಡೆಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.37ರಷ್ಟು ಮೀಸಲಾತಿ ಇದ್ದು ಇದನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಜಕೀಯದಲ್ಲಿ ಮಹಿಳೆಯರು ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ಬಜೆಟ್‍ನಲ್ಲಿ ಮಹಿಳೆಯರ ಅಭಿವೃದ್ದಿಗಾಗಿ 34,388 ಕೋಟಿ ಮೀಸಲಿಟ್ಟಿದ್ದೇವೆ. ಮಹಿಳೆಯರು ಕೈಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಉತ್ತೇಜನ ನೀಡಲು ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ಪ್ರತ್ಯೇಕ ಪಾರ್ಕ್‍ಗಳನ್ನು ಕಾಯ್ದಿರಿಸಿರುವುದು ಉತ್ತಮ ಯೋಜನೆಯಾಗಿದೆ . ಸಮಾಜದಲ್ಲಿ ಸಮಾನ ಅವಕಾಶಗಳಿಂದ ಜ್ಯೋತಿಯಂತೆ ಬೆಳಗಿ ಎಂದು ಹಾರೈಸಿದರು.
ಸಣ್ಣ ಕೈಗಾರಿಕೆಗಳ ಸಚಿವೆ ಮೋಹನ್‍ಕುಮಾರಿ ಮಾತನಾಡಿ, ವೈಮಾನಿಕ, ಬಾಹ್ಯಾಕಾಶ, ಅಣುಶಕ್ತಿ, ಸಂಶೋಧನೆ, ಶಿಕ್ಷಣ ಕ್ಷೇತ್ರಗಳಲ್ಲಿಯೂ ಸಹ ಮಹಿಳೆಯರು ಸಾಧನೆ ಮಾಡಿದ್ದು , ಭವಿಷ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಲಿ ಅವರು ಉನ್ನತ ಸ್ಥಾನಕ್ಕೆ ಏರಲಿ ಎಂದು ಹೇಳುತ್ತಾ ಮಹಿಳಾ ದಿನಾಚರಣೆಯ ಶುಭಾಷಯ ಕೋರಿದರು.
ಕಾರ್ಯಕ್ರಮದಲ್ಲಿ 141 ಕೈಗಾರಿಕಾ ಮಳಿಗೆಗಳಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕೈಗಾರಿಕಾ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಮತ್ತಿತರರು ಇದ್ದರು.