ಆಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಆಭರಣ ದರೋಡೆ

ಬೆಂಗಳೂರು, ಮಾ.2-ಆಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಇಬ್ಬರನ್ನು ಕಟ್ಟಿ ಹಾಕಿ ಹಣ, ಆಭರಣ ಕದ್ದು ಮನೆ ಮಾಲೀಕನ ಕಾರಿನಲ್ಲೇ ಪರಾರಿಯಾಗಿದ್ದ ನಾಲ್ವರನ್ನು ಜೆ.ಸಿ.ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಪ್ರಕಾಶ್‍ಗಿರಿ (39), ಸುಮನ್ ಬಹದ್ದೂರ್ ಬಿಸ್ಟ್ (27), ರುಬೇನ್ ಕಡಕಾ (19) ಕಿಶನ್‍ಗಿರಿ (29) ಬಂಧಿತ ದರೋಡೆಕೋರರು.

ಫೆ.20 ರಂದು ಆಭರಣ ವ್ಯಾಪಾರಿ, ಮಿಲ್ಲರ್ಸ್ ರಸ್ತೆಯಲ್ಲಿರುವ ಅಶೋಕ ಭಾಟಿಯಾ ಎಂಬುವರ ಮನೆಗೆ ನುಗ್ಗಿದ 11 ಮಂದಿ ಡಕಾಯಿತರ ತಂಡ ಮನೆಯಲ್ಲಿದ್ದ ಯೋಗೇಶ್‍ಶರ್ಮಾ ಮತ್ತು ಹಿತೇಶ್‍ಶರ್ಮಾ ಎಂಬುವರನ್ನು ಕಟ್ಟಿಹಾಕಿ ಹಲ್ಲೆ ನಡೆಸಿ ಬೆಳ್ಳಿ ಆಭರಣ ಹಾಗೂ 3 ಲಕ್ಷ ಹಣ ಕದ್ದು ಮನೆ ಮಾಲೀಕನ ಕಾರಿನಲ್ಲಿ ಪರಾರಿಯಾಗಿದ್ದರು.

ಈ ಬಗ್ಗೆ ಜೆ.ಸಿ.ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಘಟನೆ ನಡೆದ 5 ದಿನಗಳೊಳಗೆ 7 ಮಂದಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದ 7 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿತ್ತು.

ತದನಂತರ ಉಳಿದ ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಾಗ ಅವರು ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ಕೈಗೊಂಡು ಅಂತಾರಾಜ್ಯ ಡಕಾಯಿತರ ತಂಡದ ಪ್ರಮುಖ ಆರೋಪಿಯಾದ ಸುಮನ್ ಬಹದ್ದೂರ್ ಬಿಸ್ಟಾ ಎಂಬಾತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನನ್ನು ವಿಚಾರಣೆಗೊಳಪಡಿಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನೂ ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 11 ಮಂದಿಯನ್ನು ಬಂಧನಕ್ಕೊಳಪಡಿಸಿ ಕಳವು ಮಾಡಲಾಗಿದ್ದ ಬೆಳ್ಳಿ ವಸ್ತುಗಳು, ಕಾರು, ಮೊಬೈಲ್, ಬೈನಾಕ್ಯುಲರ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆ.ಸಿ.ನಗರ ಠಾಣೆ ಇನ್ಸ್‍ಪೆಕ್ಟರ್ ಗಿರೀಶ್ ನಾಯಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ