ಬೆಂಗಳೂರು, ಮಾ.2- ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಸಮುದಾಯ ಎಸ್ಟಿ ವರ್ಗಕ್ಕೆ ಸೇರಬೇಕಿದೆ ಎಂದು ಅವರು ಹೇಳಿದರು.
ಮೀಸಲಾತಿ ಜಾರಿಯಲ್ಲಿರುವುದು ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡುವುದಕ್ಕಲ್ಲ ಎಂದ ಅವರು, ಅನಕ್ಷರತೆ ಇರುವವರೆಗೂ ಬಡತನ ನಿವಾರಣೆ ಆಗುವುದಿಲ್ಲ. ಚಲನಶೀಲತೆ ಇರುವಲ್ಲಿ ಜಾತಿ ವ್ಯವಸ್ಥೆ ದೂರ ಸರಿಯುತ್ತದೆ. ಕೆಳ ವರ್ಗದವರಿಗೆ ಸಾಮಾಜಿಕ ಸದೃಢತೆ ದೊರೆತಾಗ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ ಎಂದರು.
ಮೀನುಗಾರರಿಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗುವುದು. ಒಳನಾಡು ಮೀನುಗಾರಿಕೆ ನೀತಿಯನ್ನು ಜಾರಿಗೆ ತರಲಾಗಿದೆ. ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗದವರು ಶಿಕ್ಷಣ ಪಡೆದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದುಳಿದ ವರ್ಗದವರಿಗೆ ಎಲ್ಲ ರೀತಿಯ ಸಹಾಯ ಮಾಡಲಾಗುವುದು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಹಿಂದುಳಿದ ವರ್ಗಕ್ಕೂ ಅನುಕೂಲ ಕಲ್ಪಿಸಲಾಗಿದೆ. ಶರಣರು ಪ್ರತಿಪಾದಿಸಿದಂತೆ ವಂಚಿತರಿಗೆ ಅವಕಾಶ ದೊರೆತು ಸಮಾನತೆಯ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
ಹಾವೇರಿ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಸಾನಿಧ್ಯ ಚೌಡಯ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ, ಯೋಜನಾ ಸಚಿವ ಎಂ.ಆರ್.ಸೀತಾರಾಂ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನ್ನಾಥ್ ಜಮಾದಾರ್ ಮತ್ತಿತರರು ಉಪಸ್ಥಿತರಿದ್ದರು.