ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ…?
ಬೆಂಗಳೂರು/ನವದೆಹಲಿ, ಮಾ.2-ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿರುವ ವಿಧಾನಸಭೆ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ವಿಧಾನ ಸಭೆ ಚುನಾವಣೆಯನ್ನು ವಿಳಂಬ ಮಾಡಲು ಸದ್ದಿಲ್ಲದೆ ಪ್ರಯತ್ನ ನಡೆಸಿದೆ.
ನಂಬಲು ಅಚ್ಚರಿಯಾದರೂ ಇದು ಸತ್ಯ. ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರದಿಂದ ಇಂಥದೊಂದು ಮೌಖಿಕ ಆದೇಶ ಬಂದಿದೆ ಎಂಬ ಮಾತು ಹಬ್ಬಿದೆಯಾದರೂ ಈವರೆಗೂ ಇದು ದೃಢಪಟ್ಟಿಲ್ಲ. ಆದರೆ ಕೇಂದ್ರ ಸರ್ಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸೂಚನೆಗೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳ ಕಾಲ ವಿಳಂಬ ಮಾಡಿ ಡಿಸೆಂಬರ್‍ನಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಗೊತ್ತಾಗಿದೆ.
ಡಿಸೆಂಬರ್‍ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಕೇಂದ್ರದ ಎನ್‍ಡಿಎ ಸರ್ಕಾರ ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆಯನ್ನು ನಡೆಸಲು ತೀರ್ಮಾನಿಸಿದೆ.
ಈ ವೇಳೆಯೇ ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಏಕಕಾಲದಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಒಂದೇ ದೇಶ ಒಂದೇ ಚುನಾವಣೆ :
ಕಳೆದ ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಒಂದೇ ದೇಶ ಒಂದೇ ಚುನಾವಣೆ ಎಂಬ ಹೊಸ ಪರಿಕಲ್ಪನೆಯನ್ನು ಜಾರಿ ಮಾಡಬೇಕೆಂದು ಬಹುತೇಕ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ.
ಈಗಿರುವ ವ್ಯವಸ್ಥೆಯಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸುವುದರಿಂದ ಅಭ್ಯರ್ಥಿಗಳ ಖರ್ಚುವೆಚ್ಚ ಹೆಚ್ಚಾಗುತ್ತದೆ ಹೊರತು ಇಳಿಕೆಯಾಗುವುದಿಲ್ಲ. ಬದಲಿಗೆ ಒಂದೇ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ನಡೆಸಿದರೆ ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಆರ್ಥಿಕ ಹೊರೆಯನ್ನು ತೊಡೆದು ಹಾಕಬಹುದೆಂದು ಸಲಹೆ ನೀಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದಲೇ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 6 ತಿಂಗಳ ಕಾಲ ವಿಳಂಬ ಮಾಡಲು ಮುಂದಾಗಿರುವುದು ತಿಳಿದುಬಂದಿದೆ.
ಈಗಿರುವ ವೇಳಾಪಟ್ಟಿಯಂತೆ 15ನೇ ವಿಧಾನಸಭೆ ಚುನಾವಣೆ ನಡೆದು ಮೇ 13ಕ್ಕೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲು ಮೇ 28ರವರೆಗೆ ಅವಧಿ ಇದೆ. ಮೇ 29ರಿಂದ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕು.
ಅಷ್ಟು ಸುಲಭವಲ್ಲ:
ಆದರೆ ಈಗಿರುವ ನಿಯಮದ ಪ್ರಕಾರ ಯಾವುದೇ ಒಂದು ರಾಜ್ಯದ ವಿಧಾನಸಭೆ ಚುನಾವಣೆಯನ್ನು ಇದ್ದಕ್ಕಿದ್ದಂತೆ ವಿಳಂಬ ಮಾಡುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಅವಧಿಗೂ ಮುನ್ನ ಚುನಾವಣೆಗೆ ಹೋಗಲು ಅವಕಾಶವಿದೆ ಹೊರತು, ಕಾರಣವಿಲ್ಲದೆ ವಿಳಂಬ ಮಾಡಲು ಆಸ್ಪದ ಇಲ್ಲ.
ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ ಅವರು ಅವಧಿಗೂ ಮುನ್ನ ಚುನಾವಣೆಗೆ ಹೋಗಿದ್ದರೆ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಹಿನ್ನಲೆಯಲ್ಲಿ ಚುನಾವಣೆ ಎದುರಾಗಿತ್ತು.
ಉಳಿದಂತೆ ಬಹುತೇಕ ಬಾರಿ ನಿಗದಿತ ಅವಧಿಯಂತೆಯೇ ಈವರೆಗೂ ಚುನಾವಣೆ ನಡೆದಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದೆ.
ಒಂದು ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ವಿಳಂಬ ಮಾಡಬೇಕಾದರೆ ಸಂಸತ್‍ನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈಗಿರುವ ಮಸೂದೆಗೆ ತಿದ್ದುಪಡಿ ಮಾಡಿ 3/2ರಷ್ಟು ಬಹುಮತದಿಂದ ಅಂಗೀಕರಿಸಬೇಕು.
ಸದ್ಯದ ಬಲಾಬಲ ಪ್ರಕಾರ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸ್ಪಷ್ಟ ಬಹುಮತ ಹೊಂದಿದೆ. ಆದರೆ ರಾಜ್ಯ ಸಭೆಯಲ್ಲಿ ಅದಕ್ಕೆ ಬಹುಮತವಿಲ್ಲ. ಈಗಾಗಲೇ ಅನೇಕ ಮಸೂದೆಗಳೇ ಬಹುಮತದ ಕೊರತೆಯಿಂದ ಬಿದ್ದುಹೋಗಿವೆ.
ವಾಸ್ತವ ಸ್ಥಿತಿ ಹೀಗಿರುವಾಗ ಏಕಾಏಕಿ ವಿಧಾನಸಭೆ ಚುನಾವಣೆಯನ್ನು ವಿಳಂಬ ಮಾಡುವುದು ಅಷ್ಟು ಸುಲಭವೂ ಅಲ್ಲ. ಕಷ್ಟ ಸಾಧ್ಯವೂ ಅಲ್ಲ.
ಕಾನೂನಿನ ಭಯ:
ಅಂದಹಾಗೆ ಕೇಂದ್ರ ಸರ್ಕಾರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳು ಮುಂದೂಡುವ ಪ್ರಯತ್ನ ಮಾಡಿದರೆ ಕೆಲವರು ಕಾನೂನಿನ ಹೋರಾಟ ನಡೆಸಬಹುದೆಂಬ ಭಯವೂ ಕಾಡುತ್ತಿದೆ.
ಈ ಹಿಂದೆ 1995ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂಪ್ರಸಾದ್ ಯಾದವ್ ರಾಜ್ಯದಲ್ಲಿ ಮತದಾರರ ಪಟ್ಟಿ ಸಿದ್ಧವಾಗಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯನ್ನು ಆರು ತಿಂಗಳ ಕಾಲ ಮುಂದೂಡುವಂತೆ ಮನವಿ ಮಾಡಿದ್ದರು. ಆದರೆ ಅಂದು ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಾಗಿದ್ದವರು ದೇಶದಲ್ಲೇ ಚುನಾವಣೆಗೆ ಹೊಸ ಭಾಷ್ಯ ಬರೆದ ದಕ್ಷ ಅಧಿಕಾರಿ ಟಿ.ಎನ್.ಶೇಷನ್ ಸರ್ಕಾರಕ್ಕೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲು ಸಾಧ್ಯವಾಗದಿದ್ದರೆ ಆಯೋಗ ಸಿದ್ದವಿದೆ ಎಂದು ಹೇಳಿದ್ದರು.
ಕೊನೆಗೆ ಪಾಟ್ನಾ ಹೈಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿತ್ತಲ್ಲದೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು.
ಇನ್ನು ಇದೇ ರೀತಿ 2003ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 6 ತಿಂಗಳ ಕಾಲ ಮುಂಚಿತವಾಗಿಯೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೊರಟಿದ್ದರು. ಆದರೆ ಮೋದಿಯವರ ಆಟಕ್ಕೆ ಆಯೋಗ ಬ್ರೇಕ್ ಹಾಕಿತ್ತು.
ಚುನಾವಣಾ ವೇಳಾ ಪಟ್ಟಿಯನ್ನು ಯಾವಾಗ ನಿಗದಿಪಡಿಸಬೇಕೆಂಬುದು ಆಯೊಗದ ಕೆಲಸವೇ ಹೊರತು. ಸರ್ಕಾರದ ಕೆಲಸವಲ್ಲ ಎಂದು ತಿರುಗೇಟು ನೀಡಿತ್ತು. ಕೊನೆಗೆ ಕಾನೂನು ಹೋರಾಟ ಆರಂಭವಾಗಿ ವಿಧಾನಸಭೆ ವಿಸರ್ಜನೆಯಾದ ಮೂರು ತಿಂಗಳ ನಂತರ ಚುನಾವಣಾ ದಿನಾಂಕ ಘೋಷಣೆಯಾಯಿತು.
ಸ್ಪಷ್ಟ ಕಾರಣ ಬೇಕು:
ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯನ್ನು ವಿಳಂಬ ಮಾಡಬೇಕಾದರೆ ಸ್ಪಷ್ಟ ಕಾರಣವನ್ನು ನೀಡಬೇಕು. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹಾಗೂ ಹಣಕಾಸಿನ ತುರ್ತು ಪರಿಸ್ಥಿತಿ ಉಂಟಾದಾಗ ಮಾತ್ರ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಮುಂದೂಡಲು ಕಾನೂನಿನಲ್ಲಿ ಅವಕಾಶವಿದೆ.
ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಡಿಸೆಂಬರ್‍ನಲ್ಲಿ ಚುನಾವಣೆ ನಡೆದರೆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸೋಲುವ ಭೀತಿಯನ್ನು ಎದುರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಚುನಾವಣೆಗೆ ಹೋದರೆ ಗೆಲ್ಲಬಹುದೆಂಬ ಸಲಹೆಯನ್ನು ಆರ್‍ಎಸ್‍ಎಸ್ ನಾಯಕರು ನೀಡಿದ್ದಾರೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಏಕರಾಷ್ಟ್ರ ಏಕ ಚುನಾವಣೆ ಕಲ್ಪನೆಯೊಂದಿಗೆ ಡಿಸೆಂಬರ್‍ನಲ್ಲಿ ಕರ್ನಾಟಕಕ್ಕೆ ಚುನಾವಣೆ ನಡೆಸಲು ಆಯೋಗಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡಿದೆ ಎಂಬ ಮಾತು ಕೇಳಿಬಂದಿದೆ.
ಮುಂದೇನು?:
ಒಂದು ವೇಳೆ ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ ಮಾಡಿದರೆ ಮೇ 13ರ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ.
ಈಗಿರುವ ಲೆಕ್ಕಾಚಾರದಂತೆ ಮೇ 13ರ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕು. ಮೇ 28ಕ್ಕೆ 15ನೇ ವಿಧಾನಸಭೆ ಅವಧಿ ಮುಗಿಯಲಿದೆ. ನಿಗದಿತ ಅವಧಿಯೊಳಗೆ ಚುನಾವಣೆ ನಡೆಯಲಿದೆಯೇ ಇಲ್ಲವೇ ವಿಳಂಬವಾಗಲಿದೆಯೇ ಎಂಬುದುನ್ನು ಕಾಲವೇ ತೀರ್ಮಾನಿಸಬೇಕು.