ಇ- ವೇ ಬಿಲ್: ತೆರಿಗೆ ಪಾವತಿ ಪ್ರಕ್ರಿಯೆ ಇನ್ನುಮುಂದೆ ಸರಳ

ಬೆಂಗಳೂರು,ಮಾ.2- ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನೆರವಾಗುವ ಭಾರತದ ಮುಂಚೂಣಿ ಸಂಸ್ಥೆಯಾದ ಕ್ಲಿಯರ್ ಟ್ಯಾಕ್ಸ್, ತೆರಿಗೆ ಪಾವತಿಯನ್ನು ಸರಳಗೊಳಿಸಲು ಇ- ವೇ ಬಿಲ್ ಪರಿಚಯಿಸಿದೆ.

ಇದೊಂದು ಅತಿ ವೇಗದ ತಂತ್ರಾಂಶವಾಗಿದ್ದು, ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಾಗ ಮಾಡುವ ಗುರಿ ಹೊಂದಿದೆ. ಈ ತಂತ್ರಾಂಶದ ಸಹಾಯದಿಂದ ಬಳಕೆದಾರರು ಬೃಹತ್ ಪ್ರಮಾಣದ ಇನ್‍ವಾಯ್ಸ್‍ಗಳನ್ನು (ಸರಕು ಪಟ್ಟಿ) ಅಪ್‍ಲೋಡ್ ಮಾಡಬಹುದು ಜೊತೆಗೆ ಇ-ವೇ ಬಿಲ್‍ನ ಭಾಗ-ಬಿನ್ನು ಇದು ಸ್ವಯಂ ಭರ್ತಿ ಮಾಡುತ್ತದೆ. ಇದು ನಕಲಿ ನಮೂದನ್ನು ತಪ್ಪಿಸುತ್ತದೆ ಹಾಗೂ ಮಾನ್ಯತೆ ಅವಧಿ ಸರಿಯಾಗಿದೆ ಎಂಬುದನ್ನು ಖುದ್ದು ದೃಢಪಡಿಸಿಕೊಳ್ಳುತ್ತದೆ.

ಈ ತಂತ್ರಾಂಶವನ್ನು ಬಳಸಿ ಒಂದು ನಿಮಿಷಕ್ಕೆ ಸುಮಾರು 300 ಇ-ವೇ ಬಿಲ್‍ನ್ನು ಸೃಷ್ಟಿಸಬಹುದು. ಅಷ್ಟೇ ಅಲ್ಲದೆ ಈ ತಂತ್ರಾಂಶವು ತಿಂಗಳ ಜಿಎಸ್‍ಟಿ ರಿಟರ್ನ್‍ನ್ನು ಸ್ವಯಂ ಸೃಷ್ಟಿಸುತ್ತದೆ. ಇದರಿಂದ ಜಿಎಸ್‍ಟಿ ಹಾಗೂ ಇ-ವೇ ಬಿಲ್‍ನಲ್ಲಿನ ಮಾಹಿತಿ ವ್ಯತ್ಯಾಸವನ್ನು ತಪ್ಪಿಸಬಹುದು.

ಗಡಿಭಾಗಗಳಿಂದ ದೇಶದ ಬೇರೆ ಬೇರೆ ಸ್ಥಳಗಳಲ್ಲಿರುವ ತನ್ನ ಗೋದಾಮುಗಳನ್ನು ನಿಯಂತ್ರಿಸುವ ಕಂಪನಿಗಳಿಗೆ ಈ ವಿಶೇಷ ಸೌಲಭ್ಯವು ವರದಾನವಾಗಿದೆ ಯಾಕೆಂದರೆ ಪ್ರತಿಯೊಂದು ರಾಜ್ಯವು ಇ-ವೇ ಬಿಲ್ ಸೃಷ್ಟಿಸಲು ಪ್ರತ್ಯೇಕ ಲಾಗಿನ್ ಇರುತ್ತದೆ.

ವ್ಯಾಪಾರದ ಗಾತ್ರದ ಹೊರತಾಗಿ, ತೆರಿಗೆ ಪಾವತಿ ಪ್ರಕ್ರಿಯೆಯನ್ನು ವೇಗ ಹಾಗೂ ಸುಲಭವಾಗಿ ಮಾಡಲು ಸ್ವಯಂಚಾಲಿತ ಇ-ವೇ ಬಿಲ್ ವ್ಯವಸ್ಥೆಯ ಪಾತ್ರ ಬಹುಮುಖ್ಯ. ತಂತ್ರಾಂಶದ ಅನುಪಸ್ಥಿತಿಯಲ್ಲಿ ತೆರಿಗೆ ಪ್ರಕ್ರಿಯೆಯನ್ನು ನಿರ್ವಹಿಸುವುದು ಕಠಿಣ. ಕ್ಲಿಯರ್ ಟ್ಯಾಕ್ಸ್ ಇ-ವೇ ಬಿಲ್ ತಂತ್ರಾಂಶದಿಂದ ಕಂಪನಿಗಳಿಗೆ ಸಮಯದ ಉಳಿತಾಯವೂ ಆಗಲಿದೆ ಎಂದು ಕಂಪನಿಯ ಮುಖ್ಯಸ್ಥ ಅರ್ಚಿತ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ