ಬೆಂಗಳೂರು,ಮಾ.2-ಮಹಾನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ದೌರ್ಜನ್ಯ, ಮೂಲಭೂತ ಸೌಕರ್ಯಗಳ ಕೊರತೆ, ಸಂಚಾರಿ ದಟ್ಟಣೆ, ಶಾಸಕ ಎನ್.ಎ.ಹಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ದೌರ್ಜನ್ಯ ಪ್ರಕರಣ ಸೇರಿದಂತೆ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಇಂದು ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಚಾಲನೆ ನೀಡಿತು.
ಪ್ರಮುಖ ಹತ್ತು ವಿಷಯಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಮಹಾನಗರದ ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ರಕ್ಷಿಸಿ ಪಾದಯಾತ್ರೆ ನಡೆಯಲಿದೆ. ಮೊದಲ ದಿನವಾದ ಇಂದು ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ರವಿಸುಬ್ರಹ್ಮಣ್ಯ, ಶಾಸಕರಾದ ಡಾ.ಅಶ್ವಥ್ ನಾರಾಯಣ ವಿಧಾನಪರಿಷತ್ ಸದಸ್ಯೆ ತಾರಾ ಸೇರಿದಂತೆ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಯುಟಿಲಿಟಿ ಬಿಲ್ಡಿಂಗ್ನಿಂದ ಆರಂಭವಾದ ಪಾದಯಾತ್ರೆಯು ನಂತರ ಕಸ್ತೂರಿ ಬಾ ರಸ್ತೆ, ನಂದಿದುರ್ಗ ರಸ್ತೆ, ಎನ್.ಆರ್.ಕಾಲೋನಿ ಮತ್ತಿತರ ಕಡೆ ಸಂಚರಿಸಿತು. ಪಾದಯಾತ್ರೆಯುದ್ದಕ್ಕೂ ಬಿಜೆಪಿಯ ನೂರಾರು ಕಾರ್ಯಕರ್ತರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಐಟಿ ಸಿಟಿಯಾಗಿದ್ದ ಬೆಂಗಳೂರು ಇಂದು ರೌಡಿಗಳು, ಸಮಾಜಘಾತುಕರು, ಕೊಲೆಗೆಡುಕರು, ಅತ್ಯಾಚಾರಿಗಳ ನಗರವಾಗಿದೆ. ಯಾವುದೇ ಕಾರಣಕ್ಕೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಾರದೆಂದು ಪ್ರಮುಖ ನಾಯಕರು ಮನವಿ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನೆ ಮುಂದಿಟ್ಟರು.
ಬೆಂಗಳೂರು ಮಹಾನಗರಕ್ಕೆ ಒಂದು ಕಾಲದಲ್ಲಿ ಮಾಹಿತಿ ತಂತ್ರಜ್ಞಾನದ ರಾಜಧಾನಿ ಉದ್ಯಾನಗಳ ನಗರಿ, ಬಂಡವಾಳ ಹೂಡಿಕೆದಾರರ ಸ್ವರ್ಗ ಎಂಬ ಹೆಸರಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದಕ್ಕೆ ನೂರೆಂಟು ವಿಘ್ನಗಳು ಎದುರಾಗಿವೆ ಎಂದು ಕಿಡಿದಾರು.
ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಕೊಂಡಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆ, ನರೇಗ, ಸ್ವಚ್ಛ ಭಾರತ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಲಂಚ ಮತ್ತು ಕಮೀಷನ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂದು ಆರೋಪಿಸಿದರು.
ಬಿಬಿಎಂಪಿಯಲ್ಲಿ ಅಧಿಕಾರಿಗಳು ಮತ್ತು ಕೆಲವರು ಶಾಮೀಲಾಗಿ ಪ್ರತಿಯೊಂದು ಕಾಮಗಾರಿಯಲ್ಲೂ ಕಮೀಷನ್ ಹೊಡೆಯುವ ದಂಧೆ ಆರಂಭಿಸಿದ್ದಾರೆ. ಮಹಾನಗರದಲ್ಲಿ ಸರಿಯಾದ ರಸ್ತೆಗಳೇ ಇಲ್ಲ. ಗುಂಡಿಗಳನ್ನು ಮುಚ್ಚಲು ನೂರಾರು ಕೋಟಿ ಹಣ ಖರ್ಚು ಮಾಡಲಾಗಿದೆ. ಇದು ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳಿಗೆ ಮಾತ್ರ ಅನುಕೂಲವಾಗಿದೆ ಮಾತ್ರ ಒಂದೇ ಒಂದು ಗುಂಡಿಯೂ ಮುಚ್ಚಿಲ್ಲ ಎಂದು ಕಿಡಿಕಾರಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಾವಿರಾರು ಕೋಟಿ ಹಣ ಹೊಂದಿದ್ದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಈಗಲೂ ಅನೇಕ ಕಡೆ ಸಂಚಾರಿ ದಟ್ಟಣೆ ಯಥಾಸ್ಥಿತಿಯಲ್ಲಿದೆ.
ಬೆಂಗಳೂರು ಮೇಲೆ ಹಿಡಿತ ಹೊಂದಿರುವ ಸಚಿವರು ಹಾಗೂ ಕೆಲ ಗುತ್ತಿಗೆದಾರರ ಜೇಬು ದಿನದಿಂದ ದಿನ ಭರ್ತಿಯಾಗುತ್ತಿದೆಯೇ ಹೊರತು ಮಹಾನಗರದ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ದೂರಿದರು.
ಗೂಂಡಾ ಸರ್ಕಾರ ಬೇಕೆ, ಗುಡ್ ಗೌರ್ನೆನ್ಸ್ ಬೇಕೆ:
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ತಮ್ಮ ಮಾತಿನುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ನಿಮಗೆ ಗೂಂಡಾ ಸರ್ಕಾರ ಬೇಕೆ, ಗುಡ್ ಗೌರ್ನೆನ್ಸ್ ಬೇಕೆ? ಕಾಂಗ್ರೆಸ್ ಗೂಂಡಾಗಳಿಂದ ಬೆಂಗಳೂರನ್ನು ರಕ್ಷಿಸಬೇಕಾದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಬರಬೇಕು. ಇದಕ್ಕಾಗಿ ನಗರದ ಜನತೆ ಸಂಕಲ್ಪ ತೊಡಬೇಕೆಂದು ಮನವಿ ಮಾಡಿದರು.
ಮಹಮ್ಮದ್ ನಲಪಾಡ್, ನಾರಾಯಣಸ್ವಾಮಿ ಪ್ರಕರಣಗಳು ಕೇವಲ ಸಾಂಕೇತಿಕ. ಇನ್ನೂ ಇಂಥ ಅನೇಕ ಪ್ರಕರಣಗಳು ಹೊರಗೆ ಬಂದಿಲ್ಲ. ಹ್ಯಾರೀಸ್ ಪುತ್ರನ ಪ್ರಕರಣ ಬೆಂಗಳೂರು ನಗರದ ಮಾನವನ್ನೇ ಹರಾಜು ಹಾಕಿತು. ಮಾಧ್ಯಮಗಳಲ್ಲಿ ಇದು ಬಿತ್ತರವಾಗದಿದ್ದರೆ ಸಂಪೂರ್ಣವಾಗಿ ಸರ್ಕಾರ ಮುಚ್ಚಿ ಹಾಕುತ್ತಿತ್ತು ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚುವ ಆಡಳಿತವನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಿಂದೆ ಗೂಂಡಾಗಳನ್ನು ಕಟ್ಟಿಕೊಂಡು ದುರಾಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ. ನಗರದ ಜನತೆ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದೆಂದು ವಾಗ್ದಾಳಿ ನಡೆಸಿದರು.
ಸರಿಯಾಗಿ ಕಸವನ್ನು ನಿರ್ವಹಣೆ ಮಾಡದೆ ನಗರವನ್ನು ಗಾರ್ಬೇಜ್ ಸಿಟಿ ಮಾಡಿದ್ದಾರೆ. ವಾರಕ್ಕೆ ಒಂದು ಬಾರಿಯೂ ಕಸ ವಿಲೇವಾರಿಯಾಗುತ್ತಿಲ್ಲ. ಎಲ್ಲೆಡೆ ಮೂಲಭೂತ ಸೌಕರ್ಯಗಳ ಕೊರತೆ, ತಾಂಡವವಾಡುತ್ತಿದೆ. ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೈ ಹಿಡಿಯಬಾರದೆಂದು ಕೋರಿದರು.
ಮುಖಂಡ ಆರ್.ಅಶೋಕ್ ಮಾತನಾಡಿ, ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮಹಾನಗರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕನಿಷ್ಠ ಇರುವ ಮೂಲಭೂತ ಸೌಕರ್ಯಗಳನ್ನು ಸಹ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ವಿದ್ಯುತ್,ಕುಡಿಯುವ ನೀರು, ಚರಂಡಿ, ಸಂಚಾರಿ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.
ಇಂದಿನಿಂದ ಆರಂಭವಾಗಿರುವ ಪಾದಯಾತ್ರೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಆಡಳಿತಾರೂಢ ಸರ್ಕಾರದ ವೈಫಲ್ಯವನ್ನು ಜನತೆಗೆ ಮನವರಿಕೆ ಮಾಡಿಕೊಡಲಾಗುವುದು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾದಯಾತ್ರೆ ವೇಳೆ ಕಾರ್ಯಕರ್ತರು ಸಿಕ್ಕಿಬಿದ್ದ ಸಿಕ್ಕಿಬಿದ್ದ ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಚಾರ ದಟ್ಟಣೆ:
ಪಾದಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾಗ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಬೇರೆ ಬೇರೆ ಸ್ಥಳಕ್ಕೆ ತೆರಳಬೇಕಾಗಿದ್ದ ಸಾರ್ವಜನಿಕರು ಪರದಾಡಿದರು