ನವದೆಹಲಿ, ಮಾ.1- ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ. ಆದರೆ, ಯುವಜನಾಂಗದ ಮನಸ್ಥಿತಿಯನ್ನು ತಪ್ಪುದಾರಿಗೆ ಎಳೆಯುತ್ತಿರುವ ವ್ಯವಸ್ಥೆ ವಿರುದ್ಧದ ಸಮರ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿಯೊಂದು ಧರ್ಮವು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಆದರೆ, ಉಗ್ರವಾದಿಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಹಿಂಸಾಚಾರ ನಡೆಸಿ ಮನುಕುಲದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿವೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿಂದು ನಡೆದ ಇಸ್ಲಾಮಿಕ್ ಪರಂಪರೆ ಕುರಿತ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತವು ಈ ಜಗತ್ತಿನ ಎಲ್ಲ ಪ್ರಮುಖ ಧರ್ಮಗಳ ಆಶ್ರಯ ತಾಣವಾಗಿದೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ಉದಾತ್ತ ದೇಶ ಭಾರತ ಎಂದವರು ಬಣ್ಣಿಸಿದರು.
ಎಲ್ಲಾ ಧರ್ಮಗಳು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ನಂಬಿಕೆಗಳನ್ನು ಪ್ರತಿಪಾದಿಸುತ್ತವೆ. ಇದಕ್ಕೆ ಇಸ್ಲಾಂ ಧರ್ಮ ಸಹ ಹೊರತಾಗಿಲ್ಲ. ಈ ಧರ್ಮದಲ್ಲಿ ಮನುಕುಲದ ಒಳಿತಿಗಾಗಿ ಅನೇಕ ಉದಾತ್ತ ಸಂದೇಶಗಳಿವೆ. ಆದರೆ, ಭಯೋತ್ಪಾದಕರು ಈ ಸಂದೇಶಗಳನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡು ಯುವ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಮಾತನಾಡಿ, ಯಾವುದೇ ಧರ್ಮದ ನಂಬಿಕೆಯು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಇಂಥ ತತ್ವವನ್ನು ಎಲ್ಲರೂ ಗೌರವಿಸಬೇಕೆಂದರು.
ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ಬೆಂಬಲ ನೀಡಲು ಜೋರ್ಡಾನ್ ಸದಾ ಬದ್ಧವಾಗಿದೆ ಎಂದು ಅಬ್ದುಲ್ಲಾ ಘೋಷಿಸಿದರು.