![Syria army foils Aleppo jail attack, kills Nusra Comdr.](http://kannada.vartamitra.com/wp-content/uploads/2018/02/syrian-army-attack.jpg)
ನವದೆಹಲಿ, ಮಾ.1- ಭಾರತೀಯ ಸೇನೆಯನ್ನು ಮತ್ತಷ್ಟ ಬಲಿಷ್ಟ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬರೊಬ್ಬರಿ 41 ಸಾವಿರ ಲೈಟ್ ಮಷಿನ್ ಗನ್ ಗಳನ್ನು ಖರೀದಿ ಮಾಡಲು ನಿರ್ಧಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕೇಂದ್ರ ರಕ್ಷಣಾ ಸಚಿವಾಲಯ ಸುಮಾರು 9,435 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ್ದು, ಈ ಪೈಕಿ 41 ಸಾವಿರ ಲೈಟ್ ಮಷಿನ್ ಗಳು, 3.5 ಲಕ್ಷ ಕಾರ್ಬೈನ್ ಗಳು ಸೇರಿದಂತೆ ವಿವಿಧ ಉಪಕರಣಗಳನ್ನು ಖರೀದಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಹಾಲಿ ಖರೀದಿಯಲ್ಲಿ ಭಾರತದ ಕಾಲ್ದಳ ಅಂದರೆ ಭೂಸೇನಾ ಪಡೆಗಳಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ನಿನ್ನೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃಕತ್ವದಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದ್ದು. ಸುಮಾರು 3 ಸಾವಿರ ಕೋಟಿ ರೂ ವೆಚ್ಚದಲ್ಲಿ 41 ಸಾವಿರ ಲೈಟ್ ಮಷಿನ್ ಗನ್ ಗಳು, 4, 607 ಕೋಟಿ ರೂ. ವೆಚ್ಚದಲ್ಲಿ 3.5 ಲಕ್ಷ ಕಾರ್ಬೈನ್ ಗಳನ್ನು ಖರೀದಿ ಮಾಡಲು ಒಪ್ಪಿಗೆ ನೀಡಲಾಗಿದೆ. ಪ್ರಮುಖವಾಗಿ ಭಾರತ ಮತ್ತು ಚೀನಾ ಗಡಿಗಳಲ್ಲಿರುವ ಸೈನಿಕರನ್ನು ಕೇಂದ್ರವಾಗಿರಿಸಿಕೊಂಡು ಈ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಕಳೆದ ಫೆಬ್ರವರಿ 13ರಂದು ಸಭೆ ನಡೆಸಿದ್ದ ರಕ್ಷಣಾ ಖರೀದಿ ಮಂಡಳಿ 15,935 ಕೋಟಿ ವೆಚ್ಚದಲ್ಲಿ 7.40 ಲಕ್ಷ ಅಸಾಲ್ಟï ರೈಫಲ್ ಗಳನ್ನು ಮತ್ತು 5,719 ಸ್ನೈಪರ್ ರೈಫಲ್ ಗಳನ್ನು ಖರೀದಿಸುವ ಕುರಿತು ಅನುಮತಿ ನೀಡಿತ್ತು. ಈ ಪೈಕಿ ಅಂದರೆ ಕಳೆದ ಪೆಬ್ರವರಿ 13 ಮತ್ತು ನಿನ್ನೆ ನಡೆದ ಸಭೆಯಲ್ಲಿನ ತೀರ್ಮಾನದಂತೆ ಭಾರತ ಖರೀದಿಸಲು ಅನುಮತಿ ನೀಡಿರುವ ಶಸ್ತ್ರಾಸ್ತ್ರಗಳ ಪೈಕಿ ಶೇ.75ರಷ್ಟು ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.