ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ

ಬೆಂಗಳೂರು, ಮಾ.1- ನಗರದಲ್ಲಿ ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಯಾಬ್ ಚಾಲಕ ಸೇರಿದಂತೆ ನಾಲ್ವರು ದರೋಡೆಕೋರರ ಹಾವಳಿಗೆ ಸಿಕ್ಕಿ ಹಣ, ಮೊಬೈಲ್ ಹಾಗೂ ಸರ ಕಳೆದುಕೊಂಡಿದ್ದಾರೆ.

ಡ್ರಾಪ್ ನೆಪದಲ್ಲಿ ಕ್ಯಾಬ್ ಚಾಲಕನ ದರೋಡೆ: ಡ್ರಾಪ್ ನೆಪದಲ್ಲಿ ಕ್ಯಾಬ್ ಬುಕ್ ಮಾಡಿ ಹತ್ತಿಕೊಂಡ ಇಬ್ಬರು ದರೋಡೆಕೋರರು ಮಾರ್ಗಮಧ್ಯೆ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ 2200ರೂ. ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ 12.30ರಲ್ಲಿ ಕೆಂಗೇರಿಯಿಂದ ಡ್ರಾಪ್‍ಗೆ ಇಬ್ಬರು ಕ್ಯಾಬ್ ಬುಕ್ ಮಾಡಿದ್ದಾರೆ. ಶ್ರೀಧರ್ ಕ್ಯಾಬ್ ಚಾಲನೆ ಮಾಡಿಕೊಂಡು ಬಂದಾಗ ಇವರಿಬ್ಬರು ಬನ್ನೇರುಘಟ್ಟ ಪಾರ್ಕ್ ಬಳಿ ಡ್ರಾಪ್ ಕೊಡುವಂತೆ ಹತ್ತಿಕೊಂಡಿದ್ದಾರೆ.

ಕಾರು ನೈಸ್ ರಸ್ತೆಯ ಟೋಲ್ ಸಮೀಪ ಬರುತ್ತಿದ್ದಂತೆ ಕಾರಿನಲ್ಲಿದ್ದ ದರೋಡೆಕೋರರು ಚಾಕು ತೋರಿಸಿ ಚಾಲಕನಿಗೆ ಬೆದರಿಸಿ ಕಾರು ನಿಲ್ಲಿಸುವಂತೆ ಹೇಳಿ ಆತನ ಮೊಬೈಲ್ ಹಾಗೂ ಹಣ ಕಸಿದುಕೊಂಡು ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ.

ನಂತರ ಶ್ರೀಧರ್ ಕೋಣನಕುಂಟೆ ಪೆÇಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ಅನ್ನಪೂರ್ಣೇಶ್ವರಿನಗರ: ರಾಮಕೃಷ್ಣನಗರದ ಗಣೇಶ್ ಎಂಬುವವರು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದರೋಡೆಕೋರರು ಇವರನ್ನು ಹಿಂಬಾಲಿಸಿ ಬಂದು ಚಾಕು ತೋರಿಸಿ ಬೆದರಿಸಿ ಮೊಬೈಲ್ ಹಾಗೂ 1500ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ 5 ಗಂಟೆ ಸಮಯದಲ್ಲಿ ಗಣೇಶ್ ಅವರು ರಿಂಗ್‍ರಸ್ತೆಯ ದುರ್ಗಮ್ಮ ಹೊಟೇಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದರೋಡೆಕೋರರು ಇವರನ್ನು ಹಿಂಬಾಲಿಸಿ ಬಂದು ದರೋಡೆ ನಡೆಸಿ ಪರಾರಿಯಾಗಿದ್ದಾರೆ.

ನಂದಿನಿ ಲೇಔಟ್: ಬೈಕ್‍ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದರಿಂದ ಸ್ನೇಹಿತರಿಗೆ ಹೇಳಿ ಪೆಟ್ರೋಲ್‍ಗಾಗಿ ಕಾಯುತ್ತಿದ್ದಾಗ ಬೈಕ್‍ನಲ್ಲಿ ಬಂದ ದರೋಡೆಕೋರರು ಇವರಿಗೆ ಚಾಕು ತೋರಿಸಿ ಬೆದರಿಸಿ 25 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬನಶಂಕರಿ 2ನೆ ಹಂತದ ರಾಘವೇಂದ್ರ ಎಂಬುವವರು ಗೊರಗುಂಟೆ ಪಾಳ್ಯದಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಲಗ್ಗೆರೆ ಬ್ರಿಡ್ಜ್ ಬಳಿ ಇಂದು ಬೆಳಗಿನ ಜಾವ 1.30ರಲ್ಲಿ ಪೆಟ್ರೋಲ್ ಖಾಲಿಯಾಗಿದೆ. ತಕ್ಷಣ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ಪೆಟ್ರೋಲ್ ತರುವಂತೆ ಹೇಳಿ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು.
ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ಅವರ ಕೊರಳಲ್ಲಿದ್ದ 25 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಾಗಲಗುಂಟೆ: ನಡೆದು ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ಮೂವರು ದರೋಡೆಕೋರರು ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಅಭಿಲಾಷ್ ಎಂಬುವವರು ರಾತ್ರಿ 12.20ರಲ್ಲಿ ಡಿಫೆನ್ಸ್ ಕಾಲೋನಿಯ 3ನೆ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಒಂದೇ ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರು ಇವರನ್ನು ತಡೆದು ನಿಲ್ಲಿಸಿ ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗುವಾಗ ಇದೇ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ದರೋಡೆಕೋರರು ಕಲ್ಲು ತೂರಿ ಪರಾರಿಯಾಗಿದ್ದಾರೆ.

ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ