ವಾಷಿಂಗ್ಟನ್, ಮಾ.1-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರ ರಾಜೀನಾಮೆ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಮಾಹಿತಿ ನಿರ್ದೇಶಕಿ ಹಾಗೂ ಟ್ರಂಪ್ ಪರಮಾಪ್ತೆ ಹೋಪ್ ಹಿಕ್ಸ್ ತಮ್ಮ ಹುದ್ದೆಗೆ ತಾಗ್ಯಪತ್ರ ಸಲ್ಲಿಸಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ರಷ್ಯಾ ಹಸ್ತಕ್ಷೇಪ ಮಾಡಿದ ಪ್ರಕರಣದಲ್ಲಿ ಈಕೆಯ ಹೆಸರು ಕೇಳಿ ಬಂದಿತು. ಇದರ ಬೆನ್ನಲ್ಲೇ ಸದನದ ಗುಪ್ತಚರ ಸಮಿತಿ ಆಕೆಯನ್ನು ಈ ವಿವಾದದಲ್ಲಿ ಹೆಸರಿತ್ತು. ಈ ಹಿನ್ನೆಲೆಯಲ್ಲಿ ಹೋಪ್ ಹಿಕ್ಸ್ ಹುದ್ದೆ ತ್ಯಜಿಸಿದ್ದಾರೆ.
ವಿವಿಧ ಹುದ್ದೆಗಳಲ್ಲಿ ಟ್ರಂಪ್ಗಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅತ್ಯಂತ ನಂಬಿಕಸ್ಥೆ 29 ವರ್ಷಗಳ ಹಿಕ್ಸ್ ಇಂದು ವೈಟ್ಹೌಸ್ಗೆ ರಾಜೀನಾಮೆ ನೀಡಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಟ್ರಂಪ್ ನಿಕಟವರ್ತಿಯಾಗಿದ್ದ ಅವರು ಜನವರಿ 20, 2017ರಂದು ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಪ್ರಚಾರಾಂದೋಲನ ವಕ್ತಾರೆ ಮತ್ತು ಮಾಹಿತಿ ನಿರ್ದೇಶಕರಾಗಿದ್ದರು. ಅದಕ್ಕೂ ಹಿಂದೆ ಟ್ರಂಪ್ಗಾಗಿ ವಿವಿಧ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು.