ಬೆಂಗಳೂರು, ಮಾ.1- ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವತಿಯಿಂದ ನೂತನವಾಗಿ ನಗರದ ಓಕಳಿಪುರಂ ಜಂಕ್ಷನ್‍ನಿಂದ ಫೌಂಟೇನ್ ವೃತ್ತದವರೆಗೆ 8 ಪಥದ ಕಾರಿಡಾರ್ ರಸ್ತೆ, ಅಂಡರ್‍ಪಾಸ್, ರೈಲ್ವೆ, ಕೆಳ ಸೇತುವೆಗಳ ನಿರ್ಮಾಣ ಕಾಮಗಾರಿಯ ಮೊದಲ ಹಂತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಮಲ್ಲೇಶ್ವರಂ ಕಡೆಯಿಂದ ರಾಜಾಜಿನಗರಕ್ಕೆ 2 ಪಥದ ಏಕಮುಖ ಸಂಚಾರದ ಕೆಳಸೇತುವೆ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಂ ಕಡೆಗೆ ಹೋಗುವ 2 ಪಥದ ಏಕಮುಖ ಸಂಚಾರದ ಮೇಲ್ಸೇತುವೆ ಹಾಗೂ ರ್ಯಾಂಪ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರಾಜಾಜಿನಗರದ ಕಡೆಗೆ ಕೆಳಸೇತುವೆ ಮುಖಾಂತರ ಹೋಗುವ 2 ಪಥದ ಏಕಮುಖ ರಸ್ತೆಯನ್ನು ಉದ್ಘಾಟಿಸಿದರು.
ಓಕಳಿಪುರಂ ವೃತ್ತದಿಂದ ಮೌಂಟೇನ್ ವೃತ್ತದವರೆಗೆ 8 ಪಥಗಳ ದ್ವಿಮುಖ ಸಂಚಾರ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ನಗರದ ಪಶ್ಚಿಮ ಭಾಗದಿಂದ ಹೃದಯ ಭಾಗ ಸೇರಿದಂತೆ ಇತರೆ ಕಡೆಗಳಲ್ಲಿ ತಡೆರಹಿತ ವಾಹನ ಸಂಚಾರ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ.
ರಾಜಾಜಿನಗರದಿಂದ ಮಲ್ಲೇಶ್ವರಂ ಕಡೆಗೆ ತಡೆರಹಿತ ಸಂಚಾರಕ್ಕಾಗಿ ನಿರ್ಮಿಸುತ್ತಿರುವ ದ್ವಿಪಥದ ಏಕಮುಖ ರಸ್ತೆಯ ಉದ್ದ 800 ಮೀಟರ್, ರಾಜಾಜಿನಗರದಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ 2 ಪಥದ ಏಕಮುಖ ಸಂಚಾರದ ಮೇಲ್ಸೇತುವೆಯ ವಿಸ್ತೀರ್ಣ 290 ಮೀಟರ್, ಮಲ್ಲೇಶ್ವರಂನಿಂದ ರಾಜಾಜಿನಗರದ ಕಡೆಗೆ 2 ಪಥದ ಏಕಮುಖ ಸಂಚಾರದ ಕೆಳಸೇತುವೆ ಉದ್ದ 272 ಮೀಟರ್ ಆಗಿರುತ್ತದೆ.
ಎಂಟು ಪಥದ ಕಾರಿಡಾರ್ ರಸ್ತೆ, ಅಂಡರ್‍ಪಾಸ್ ರೈಲ್ವೆ ಕೆಳಸೇತುವೆಗಳ ನಿರ್ಮಾಣಕ್ಕೆ 2011ರಲ್ಲಿ 115 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ದೊರಕಿತ್ತು. 2012ರಲ್ಲಿ 102.83 ಕೋಟಿ ರೂ.ಗಳಿಗೆ ಟೆಂಡರ್ ಅನುಮೋದನೆಯಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.