ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಇಡಿಯಿಂದ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳ ಜಪ್ತಿ

ನವದೆಹಲಿ:ಮಾ-1: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ದೆಹಲಿ ಸೇರಿದಂತೆ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ ಒಟ್ಟು 41 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಯ ಮೌಲ್ಯ ಸುಮಾರು 1200 ಕೋಟಿ ರೂಗಳಿಗೂ ಅಧಿಕವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಮೆಹುಲ್ ಚೋಕ್ಸಿಯ ಸಮೂಹ ಸಂಸ್ಥೆಗಳಾದ ಗೀತಾಂಜಲಿ ಜೆಮ್ಸ್ ಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಚೋಕ್ಸಿ ಸಮೂಹಕ್ಕೆ ಸೇರಿದ ಮುಂಬೈನಲ್ಲಿರುವ 15 ಫ್ಲಾಟ್ ಗಳು, 17 ಕಚೇರಿಗಳು, ಕೋಲ್ಕತಾದಲ್ಲಿರುವ ಒಂದು ಮಾಲ್,  ಅಲಿಭಾಗ್ ನಲ್ಲಿರುವ ಸುಮಾರು 4 ಎಕರೆ ಪ್ರದೇಶದ ಒಂದು ಫಾರ್ಮ್ ಹೌಸ್, ನಾಸಿಕ್, ನಾಗಪುರ, ತಮಿಳು ನಾಡಿನ ಪನ್ವೆಲ್ ಮತ್ತು ವಿಳ್ಳುಪುರಂನಲ್ಲಿರುವ ಸುಮಾರು 231 ಎಕರೆ ಭೂಮಿ, ಹೈದರಾಬಾದ್ ನಲ್ಲಿರುವ ಸುಮಾರು 170 ಎಕರೆ ಪಾರ್ಕ್, ರಂಗಾರೆಡ್ಡಿಯಲ್ಲಿರುವ ಸುಮಾರು 500 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

ಇನ್ನು ಮಹಾರಾಷ್ಟ್ರ ರಾಜಧಾನಿ ಮುಂಬೈನ ಸಮೀಪವಿರುವ ಬೊರಿವಲಿ ಪ್ರದೇಶದಲ್ಲಿರುವ ನಾಲ್ಕು ಫ್ಲಾಟ್ ಗಳು, ಸ್ಯಾಂಟಾಕ್ರೂಜ್ ನ ಖೆಮು ಟವರ್ಸ್ ನಲ್ಲಿರುವ 9 ಫ್ಲಾಟ್ ಗಳಿಗೂ ಇಡಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಎಲ್ಲ ಆಸ್ತಿಗಳ ಮೌಲ್ಯ ಸುಮಾರು 1, 200 ಕೋಟಿ ಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ