ಐಎನ್ ಎಕ್ಸ್ ಪ್ರಕರಣ: ಚಿದಂಬರಂ ಬಗ್ಗೆ ಇಂದ್ರಾಣಿ ಹೇಳಿದ್ದೇನು?

ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಗ್ಗೆ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಮಹತ್ವದ ಮಾಹಿತಿ ನೀಡಿದ್ದಾರೆ.

ಸಿಬಿಐ ಅಧಿಕಾರಿಗಳಿಗೆ ಹೇಳಿಕೆ ನೀಡಿರುವ ಇಂದ್ರಾಣಿ ಮುಖರ್ಜಿ, ಕಾರ್ತಿ ಚಿದಂಬರಂ 305 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮ ಕಂಪನಿಗೆ ವಿದೇಶದಿಂದ ಹಣ ವರ್ಗಾವಣೆ ಅನುಮತಿಗೆ ಕಾರ್ತಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ. ಅಂದು ಅವರ ತಂದೆ ಪಿ.ಚಿದಂಬರಂ 2013ರಲ್ಲಿ ಹಣಕಾಸು ಸಚಿವರಾಗಿದ್ದಾಗ ಪ್ರಭಾವ ಬಳಸಿಕೊಂಡು ಕಾರ್ತಿ ಈ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಬುಧವಾರ ಬಂಧನಕ್ಕೊಳಗಾಗಿ ಸಿಬಿಐ ಕಸ್ಟಡಿಯಲ್ಲಿರುವ ಕಾರ್ತಿ ಚಿದಂಬರಂ ಅವರನ್ನು ಇಂದು ದೆಹಲಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ.
ಅಕ್ರಮವಾಗಿ ವಿದೇಶಿ ಹಣ ವರ್ಗಾವಣೆ ಯತ್ನಿಸಿದ್ದ ಆರೋಪದಡಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಬುಧವಾರ ಬಂಧನಕ್ಕೊಳಗಾಗಿದ್ದಾರೆ. ಕಾರ್ತಿ ಪ್ರಕರಣದಲ್ಲಿ ಸಂಬಂಧ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಹೇಳಿಕೆಯನ್ನು ಸಿಬಿಐ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಹಾಗೂ ಅವರ ಪತಿ ಪೀಟರ್ ಮುಖರ್ಜಿ ಆರೋಪಿಗಳಾಗಿದ್ದಾರೆ.

ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರ ಸಿಎ ಎಸ್. ಭಾಸ್ಕರಾಮನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಪಟಿಯಾಲ ಕೋರ್ಟ್ ನಲ್ಲಿ ನಡೆಯಲಿದೆ.

ನಿನ್ನೆ ಬೆಳಗ್ಗೆ ಚೆನ್ನೈನ ಏರ್ಪೋರ್ಟ್ ನಲ್ಲಿ ಕಾರ್ತಿ ಅವರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು ಸಾಕಷ್ಟು ವಿಚಾರಣೆ ನಡೆಸಿದ್ದರು. ನಂತರ ಅವರನ್ನು ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 15 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್‌‌ ಒಂದು ದಿನ ಸಿಬಿಐ ಕಸ್ಟಡಿಗೆ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ