ಬೆಂಗಳೂರು,ಫೆ.28-ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾ.23ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪ್ರಾರಂಭವಾಗಿದೆ.
ಮತ್ತೊಂದೆಡೆ ಆಕಾಂಕ್ಷಿಗಳು ರಾಜಕೀಯ ಒತ್ತಡ, ಶಿಫಾರಸನ್ನು ಆಯಾ ಪಕ್ಷದ ವರಿಷ್ಠರ ಮೇಲೆ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯ ಸಿದ್ಧತೆ ಹಾಗೂ ಪ್ರಚಾರದಲ್ಲಿ ನಿರತವಾಗಿರುವ ರಾಜಕೀಯ ಪಕ್ಷಗಳ ನೇತಾರರು ಇನ್ನು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳು ಯಾರೆಂಬುದನ್ನು ಅಧಿಕೃತವಾಗಿ ಆಯ್ಕೆ ಮಾಡಿಲ್ಲ.
ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್ನ ಎಂ.ರೆಹಮಾನ್ ಖಾನ್, ಬಿಜೆಪಿಯ ಬಸವರಾಜ ಪಾಟೀಲ್, ರಂಗಸಾಯಿ ರಾಮಕೃಷ್ಣ ಮತ್ತು ಪಕ್ಷೇತರರಾದ ರಾಜೀವ್ ಚಂದ್ರಶೇಖರ್ ಏ.2ರಂದು ನಿವೃತ್ತಿ ಹೊಂದುತ್ತಿದ್ದಾರೆ.
ನಿವೃತ್ತಿಯಿಂದ ತೆರವಾಗುವ ಈ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಮಾರ್ಚ್ 23ರಂದು ಮತದಾನದ ದಿನಾಂಕ ನಿಗದಪಡಿಸಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದ್ದು , ವಿಧಾನಸಭೆಯಲ್ಲಿ ಪಕ್ಷಗಳ ಶಾಸಕರ ಸಂಖ್ಯಾಬಲದಲ್ಲೂ ಏರಿಳಿತ ಉಂಟಾಗಿದೆ.
224 ಶಾಸಕರ ಬಲ ಹೊಂದಿರುವ ವಿಧಾನಸಭೆಯಲ್ಲಿ ಏಳು ಸ್ಥಾನಗಳು ಖಾಲಿ ಉಳಿದಿವೆ. ಕಾಂಗ್ರೆಸ್ 122, ಬಿಜೆಪಿ 43, ಜೆಡಿಎಸ್ 37, ಬಿಎಸ್ಆರ್ 3, ಕೆಜೆಪಿ 2, ಕೆಎಂಪಿ 1, ಪಕ್ಷೇತರರು 8 ಹಾಗೂ ಸಭಾಧ್ಯಕ್ಷರನ್ನು ಒಳಗೊಂಡಂತೆ 217 ಶಾಸಕರಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಶಾಸಕರ ಸಂಖ್ಯಾ ಬಲದ ಮೇಲೆ ಎರಡು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಮೂರನೇಯ ಸ್ಥಾನ ಗೆಲ್ಲಬೇಕಾದರೆ ಪಕ್ಷೇತರರ ಹಾಗೂ ಜೆಡಿಎಸ್ ಶಾಸಕರ ಬೆಂಬಲ ಅಗತ್ಯವಿದೆ.
ಬಿಜೆಪಿಗೆ ಈಗಾಗಲೇ ಶಾಸಕಾರದ ಯೋಗೇಶ್ವರ್, ಪಿ.ರಾಜೀವ ಸೇರ್ಪಡೆಯಾಗಿರುವುದರಿಂದ 45 ಶಾಸಕರ ಬಲವಿದೆ. ಹೀಗಾಗಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲುವುದು ಬಿಜೆಪಿಗೆ ತೊಂದರೆ ಉಂಟಾಗುವುದಿಲ್ಲ. ಆದರೆ ಜೆಡಿಎಸ್ ಒಂದು ಸ್ಥಾನ ಗೆಲ್ಲಬೇಕಾದರೂ ಬೇರೆ ಪಕ್ಷದ ಶಾಸಕರ ಸಹಕಾರ ಅನಿವಾರ್ಯವಾಗಿದೆ.
ನಿವೃತ್ತಿಯಾಗುವ ರೆಹಮಾನ್ ಖಾನ್ ಅವರನ್ನು ಮತ್ತೆ ಅಖಾಡಕ್ಕೆ ಇಳಿಸುವ ಸಾಧ್ಯತೆಯಿದ್ದು , ಮತ್ತೊಬ್ಬ ಅಭ್ಯರ್ಥಿ ಯಾರೆಂಬ ಬಗ್ಗೆ ಹಾಗೂ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ಇನ್ನೂ ತೀರ್ಮಾನವಾಗಿಲ್ಲ.
40 ಶಾಸಕರ ಬಲ ಹೊಂದಿದ್ದ ಜೆಡಿಎಸ್ನಲ್ಲಿ ಇಬ್ಬರು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರಾಗಿದ್ದ ಚಿಕ್ಕಮಾದು ನಿಧನ ಹೊಂದಿದ್ದಾರೆ. ಅಲ್ಲದೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ 7 ಮಂದಿ ಶಾಸಕರು ಅಮಾನತ್ತುಗೊಂಡಿದ್ದಾರೆ.
ಹೀಗಾಗಿ ಜೆಡಿಎಸ್ ಶಾಸಕರ ಸಂಖ್ಯೆ 30ಕ್ಕಿಂತ ಕಡಿಮೆಯಾಗಲಿದೆ. ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಉತ್ತರಕರ್ನಾಟಕದ ಪ್ರವಾಸದಲ್ಲಿದ್ದಾರೆ. ವಿಕಾಸಪರ್ವ ಯಾತ್ರೆ ಮುಗಿಸಿದ ನಂತರ ರಾಜ್ಯಸಭೆ ಚುನಾವಣೆಯ ಬಗ್ಗೆ ಕುಮಾರಸ್ವಾಮಿ ಸಮಾಲೋಚಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎಂ.ಫಾರೂಕ್ ಅವರಿಗೆ ಮತ್ತೆ ರಾಜ್ಯಸಭಾ ಚುನಾವಣಾ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಬಿಜೆಪಿಯಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಮುರುಳೀಧರ್ ರಾವ್ ಮತ್ತು ನಿವೃತ್ತಿಯಾಗುತ್ತಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಬಲ ಆಕಾಂಕ್ಷಿಗಳಾಗಿದ್ದು , ಕೊನೆ ಗಳಿಗೆಯಲ್ಲಿ ಬಿಜೆಪಿ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕು.
ಮಾ. 5ರಂದು ರಾಜ್ಯಸಭಾ ಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು , ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅಷ್ಟರಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ.